ಪದ್ಮಶಾಲಿ ಪತ್ರಿಕೆ ಸಂಪಾದಕ ಶ್ರೀ ಸಾಮದೇಶಿ ನಾಗರಾಜು ಇಂದು ಬೆಳಗ್ಗೆ ಹೃದಯಾಘಾತ ದಿಂದ ನಿಧನರಾಗಿದರೆಂದು ತಿಳಿಸಲು ವಿಷಾದಿಸುತ್ತೇವೆ. ಪದ್ಮಶಾಲಿ ಪತ್ರಿಕೆಯನ್ನು ಕಳೆದ 47 ವರ್ಷಗಳಿಂದ ಸತತವಾಗಿ ಪ್ರಕಟಿಸುತ್ತಾ ಬಂದಿದ್ದರು. ಅಲ್ಲದೆ ಪದ್ಮಶಾಲಿ ಸಂಘದಲ್ಲೂ ಅಪಾರ ಸೇವೆ ಸಲ್ಲಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಶ್ರೀ ಸಾಮದೇಶಿ ನಾಗರಾಜು ತಮ್ಮ ಪತ್ನಿಯನ್ನು ಕಳೆದುಕೂಂಡಿದ್ದರು. ಹೃದಯ ಸಂಬಂಧಿ ಖಾಯಿಲೆಗೆ ಒಳಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೂಂಡು ಗುಣಮುಖರಾಗಿದ್ದರು.70 ವಯಸ್ಸಿನ ಶ್ರೀ ಸಾಮದೇಶಿ ನಾಗರಾಜು ರವರಿಗೆ ಇಂದು ಹಠಾತ್ ಹೃದಯಾಘಾತ ಸಂಭವಿಸಿ ಕೂನೆಯುಸಿರೆಳೆದರು. ಶ್ರೀ ಸಾಮದೇಶಿ ನಾಗರಾಜು ನಿಧನಕ್ಕೆ ನೇಕಾರ ಸಮುದಾಯ ತೀವ್ರ ಶೋಕ ವ್ಯಕ್ತಪಡಿಸಿದೆ. ನೇಕಾರ ಕಾರ್ಯಕರ್ತ ಪರಿಷತ್ ಪದಾಧಿಕಾರಿಗಳಾಗಿದ್ದ ಶ್ರೀ ಸಾಮದೇಶಿ ನಾಗರಾಜು ರವರ ಸಾವಿಗೆ ಪರಿಷತ್ ಶೋಕ ವ್ಯಕ್ತಪಡಿಸಿದೆ.
ಹಲವಾರು ಎಡರು ತೊಡರುಗಳ ನಡುವೆಯೂ ಸುದೀರ್ಘವಾಗಿ ನಡೆದುಕೊಂಡು ಬರುತ್ತಿರುವ , ಬೆಂಗಳೂರಿನಿಂದ ಪ್ರಕಟಗೊಳ್ಳುತ್ತಿರುವ ನೇಕಾರ ಸಮಾಜದ ಅತೀ ಹಿರಿಯ ಪತ್ರಿಕೆ “ಪದ್ಮಶಾಲಿ ” ಯ ಸಂಪಾದಕರಾದ ಶ್ರೀಯುತ ಸಾಮದೇಶಿ ಟಿ. ನಾಗರಾಜು ರವರು ( 70 ವರ್ಷ ) ಇಂದು (ದಿನಾಂಕ 18/01/2025) ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಅವರು ಒಬ್ಬಳು ಪುತ್ರಿ, ಒಬ್ಬ ಪುತ್ರ, ಅಸಂಖ್ಯಾತ ಬಂಧು ಬಳಗ, ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
47 ವರ್ಷಗಳಿಂದ ತನ್ನ ಪತ್ನಿ ದಿ| ಗುಣಶೀಲ ಅವರೊಡನೆ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದ ಅವರು 3 ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದರು.
ಶ್ರೀಯುತರು ದಿಟ್ಟ ನೇರ ನುಡಿಯ ಸಂಪಾದಕತ್ವಕ್ಕೆ ಹೆಸರುವಾಸಿ ಯಾಗಿದ್ದು , ಸಾಮಾಜಿಕ ಸಮಸ್ಯೆಗಳನ್ನು ತನ್ನ ಸಂಪಾದಕೀಯದ ಮೂಲಕ ಎತ್ತಿತೋರಿಸುತ್ತಿದ್ದರಲ್ಲದೆ ಮಾರ್ಗದರ್ಶನ ಕೂಡಾ ಮಾಡುತ್ತಿದ್ದರು.
ಶ್ರೀಯುತರು ಬೆಂಗಳೂರಿನ ಪದ್ಮಶಾಲಿ ಸೌಹಾರ್ದ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಹಾಲಿ ನಿರ್ದೇಶಕ ಮಂಡಳಿಯ ಸದಸ್ಯರಾಗಿದ್ದು, 2025-2030 ರ ನಿರ್ದೇಶಕ ಮ0ಡಳಿ ಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಹಾಲಿ ಆಡಳಿತ ಮಂಡಳಿಯ ಅವಧಿಯಲ್ಲಿ ಸೌಹಾರ್ದ ಸೊಸೈಟಿಯು 3769 ಸದಸ್ಯರನ್ನು ಹೊಂದಿದ್ದು, ದುಡಿಯುವ ಬಂಡವಾಳವು ರೂ.5609.63 ಲಕ್ಷ ಹಾಗೂ ನಿವ್ವಳ ಲಾಭವು ರೂ.158.67 ಲಕ್ಷ ಕ್ಕೆ ಏರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಪದ್ಮಶಾಲಿ ಪತ್ರಿಕೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರಸಿದ್ಧಿಯನ್ನು ಪಡೆದಿದ್ದು, ಮುಖ್ಯವಾಗಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಅತೀ ಹೆಚ್ಚಿನ ಚಂದಾದಾರರನ್ನು ಹೊಂದಿರುವುದಲ್ಲದೆ ಮೂರೂ ಜಿಲ್ಲೆಯ ನೇಕಾರ ಸಮಾಜಭಾಂದವರಿಗೆ ಅಚ್ಚುಮೆಚ್ಚಿನ ಪತ್ರಿಕೆಯಾಗಿರುತ್ತದೆ. ಇನ್ನು ಮೂರು ವರ್ಷಗಳಲ್ಲಿ ದಕ್ಷಿಣದ ಮೂರೂ ಜಿಲ್ಲೆಯ ಅಭಿಮಾನಿಗಳನ್ನು ಕೂಡಾ ಸೇರಿಸಿಕೊಂಡು ಪತ್ರಿಕೆಯ 50ನೇ ವರ್ಷದ ಸಮಾರಂಭವನ್ನು ಅದ್ದೂರಿಯಾಗಿ ಜರಗಿಸುವ ಯೋಜನೆಯನ್ನು ಹಾಕಿಕೊಂಡಿದ್ದರು.
ಶ್ರೀಯುತರ ಅಗಲುವಿಕೆ ಇಡೀ ನೇಕಾರ ಸಮಾಜ ಹಾಗೂ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿರುತ್ತದೆ.
ಶ್ರೀಯುತರ ಆತ್ಮಕ್ಕೆ ಪದ್ಮಶಾಲಿ ಸಮಾಜದ ಕುಲದೇವರು ಶ್ರೀ ಮಾಕಂಡೇಶ್ವರ ದೇವರು ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಹಾಗೂ ಅವರ ಅಗಲುವಿಕೆಯಿಂದಾದ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಬಂಧುಗಳಿಗೆ ನೀಡಲಿ ಎಂದು ಶ್ರೀ ದೇವರನ್ನು ಬೇಡುತ್ತೇನೆ.
ಬಿ. ವಿಠ್ಠಲ ಶೆಟ್ಟಿಗಾರ್ ಉಡುಪಿ.