![]()
ಹಿಂದಿನ ಸಂಚಿಕೆಯ ಕೊನೆಯಲ್ಲಿ ಆದ್ಯ ವಚನಕಾರ ಮತ್ತು ನೇಕಾರ ಜೇಡರ ದಾಸಿಮಯ್ಯನವರ ಬಗ್ಗೆ ಹೇಳಿದ್ದೆ. ಯಾದಗಿರಿ ಜಿಲ್ಲೆಯ ಮುದನೂರು ಎಂಬಲ್ಲಿ ರಾಮಯ್ಯ ಮತ್ತು ಶಂಕರೀ ದಂಪತಿಗಳ ಪುತ್ರನಾಗಿ ಜನಿಸಿದ ಜೇಡರ ದಾಸಿಮಯ್ಯನವರ ಬಾಲ್ಯದ ವಿದ್ಯಾಭ್ಯಾಸ ನಡೆದದ್ದು ಶ್ರೀ ಶೈಲದಲ್ಲಿ. ಅವರ ಗುರು ಚಂದ್ರ ಗುಂಡ ಶಿವಾಚಾರ್ಯರು. ಪ್ರತಿಯೊಂದು ವಿಷಯದಲ್ಲೂ ವಿಶೇಷ ಆಸಕ್ತಿ ಹೊಂದಿದ್ದ ಅವರು ಗುರುಗಳಿಗೆ ಮೆಚ್ಚಿನ ವಿದ್ಯಾರ್ಥಿಯಾಗಿದ್ದರು. ಹನ್ನೊಂದು ಹನ್ನೆರಡನೆಯ ಶತಮಾನದಲ್ಲಿ ಕಾಣ ಸಿಗುವ ಮೊದಲ ವಚನಕಾರರೆಂದು ಹಲವರ ಉಲ್ಲೇಖ. ವಚನಕಾರ ಇವರಾಗಿದ್ದರೂ ಇವರ ವಚನಗಳು ಬರೆಹ ರೂಪದಲ್ಲಿ ಸಿಗುವುದು ಬಹಳ ಕಡಿಮೆ. ನಾನು ಕೇಳಲ್ಪಟ್ಟಂತೆ ಇನ್ನೂರನ್ನೂ ದಾಟಿಲ್ಲ. ಲಭ್ಯವಿರುವ ವಚನಗಳೆಲ್ಲ ಅತ್ಯಮೂಲ್ಯ. ಅವರಲ್ಲಿದ್ದ ವಿಶೇಷ ಜ್ಞಾನ ,ಆಧ್ಯಾತ್ಮಿಕ ಚಿಂತನೆ ,ವೈಚಾರಿಕತೆ ಅಪಾರ.
ಇವರ ಪತ್ನಿ ದುಗ್ಗಳೆ ಕೂಡಾ ವಚನಕಾರ್ತಿ , ಸರ್ವ ಸದ್ಗುಣ ಸಂಪನ್ನೆ.. ಜೇಡರ ದಾಸಿಮಯ್ಯನವರ ಅಂಕಿತನಾಮ ರಾಮನಾಥ . ಪತ್ನಿಯ ಅಂಕಿತ ನಾಮ ‘ದಾಸಯ್ಯ ಪ್ರಿಯ ರಾಮನಾಥ’..
ಅಗ್ನಿ ಸುಡಲಲ್ಲದೆ ಸುಳಿಯಲರಿಯದು
ವಾಯು ಸುಳಿವುದಲ್ಲದೆ ಸುಡಲರಿಯದು
ಆ ಆಗ್ನಿ ವಾಯುವ ಕೂಡಿದಲ್ಲದೆ ಅಡಿಯಿಡಲರಿಯದು
ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನ ಭೇದವ? ರಾಮನಾಥ
ಇದು ಜೇಡರ ದಾಸಿಮಯ್ಯನವರ ಒಂದು ವಚನ
ಭಕ್ತನಾದಡೆ ಬಸವಣ್ಣನಂತಾಗಬೇಕು
ಜಂಗಮವಾದಡೆ ಪ್ರಭುದೇವರಂತಾಗಬೇಕು
ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು
ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು
ಐಕ್ಯನಾದಡೆ ಅಜಗಣ್ಣನಂತಾಗಬೇಕು
ಇಂತಿವರ ಕಾರುಣ್ಯ ಪ್ರಸಾದವ ಕೊಂಡು ಸತ್ತ ಹಾಗಿರಬೇಕಲ್ಲದೆ
ತತ್ವದ ಮಾತು ಎನಗೇಕಯ್ಯ ದಾಸಯ್ಯಪ್ರಿಯ ರಾಮನಾಥಾ
ಇದು ಪತ್ನಿ ದುಗ್ಗಳೆಯ ವಚನ
ಒಂಬತ್ತು ವರ್ಷದ ದುಗ್ಗಳೆಯನ್ನು ಮದುವೆಯಾದ ಜೇಡರ ಅಥವಾ ಜಾಡರ ದಾಸಿಮಯ್ಯ ತಮ್ಮ ವಚನಗಳಲ್ಲಿ ಹೆಚ್ಚಾಗಿ ಜಾಣೆ ಮಡದಿ ದುಗ್ಗಳೆಯನ್ನು ವರ್ಣಿಸುವುದು ಕಂಡು ಬರುವುದು. ತನ್ನ ಸತಿಗೆ ಅದೆಷ್ಟು ಮರ್ಯಾದೆ ಕೊಡುತ್ತಿದ್ದರು ಅವರು. ಈ ಇಪ್ಪತ್ತೊಂದನೇ ಶತಮಾನದಲ್ಲೇ ಹೆಣ್ಣು ಶೋಷಣೆಗೆ ಒಳಗಾಗುವುದು ನಿಂತಿಲ್ಲ. ಆದರೆ ಬಹಳ ಹಿಂದೆ ಹೆಣ್ಣಿಗದೆಷ್ಟು ಮನ್ನಣೆ ಸಿಗುತ್ತಿತ್ತು ನೋಡಿ. ನಮ್ಮ ನೇಕಾರ ಬಂಧು ದಾಸಿಮಯ್ಯನವರು ತನ್ನ ವಲ್ಲಭೆಯನ್ನು ಅದೆಷ್ಟು ಪ್ರೀತಿಸುತ್ತಿದ್ದರು ಗೌರವಿಸುತ್ತಿದ್ದರು. ಇದು ಸರ್ವರಿಗೂ ಮಾದರಿಯಾಗ ಬೇಕು.
ಇವರಿಬ್ಬರ ಆತ್ಮಜೆ ಸುವರ್ಚಲೆ. ಈಕೆ ಕೂಡಾ ಪರಮ ಜ್ಞಾನಿಯಂತೆ. ಸಂತೃಪ್ತ ಬಾಳುವೆಗೆ ಯಾವುದೇ ಅಡೆ ತಡೆಯಿರದಿದ್ದರೂ ಜೇಡರ ದಾಸಿಮಯ್ಯನವರ ಮನಸ್ಸು ಸನ್ಯಾಸತ್ವದ ಕಡೆಗೆ ವಾಲಿದ್ದು ವಿಶೇಷ. ಬಹುಶಃ ಆಗಿನ ವಾತಾವರಣವೇ ಹಾಗಿತ್ತು.
ಶಿವನ ಕುರಿತಾಗಿ ಹಲವು ಕಾಲ ತಪಸ್ಸನ್ನು ಮಾಡಿ ಸಫಲತೆಯನ್ನು ಪಡೆದವರು ಅವರು. ಶಿವನಲ್ಲೇ ತನ್ನ ಅಸ್ತಿತ್ವ ಎಂದುಕೊಂಡವರಿಗೆ ಶಿವನೇ ತೋರಿಸಿದ ಮಾರ್ಗ ನೇಕಾರಿಕೆ. ” ಸನ್ಯಾಸಿಯಂತೆ ಬಾಳುವುದನ್ನು ಬಿಟ್ಟು ಸುರರ ಮತ್ತು ನರರ ಮಾನ ಮುಚ್ಚುವ ಬಟ್ಟೆ ನೇಯ್ಗೆಯತ್ತ ಗಮನ ಹರಿಸು. ಸನ್ಯಾಸಿಯಾಗಿ ನೀನು ಸಾಧಿಸುವುದು ಏನಿದೆ? ಲೋಕ ಕಲ್ಯಾಣಕ್ಕಾಗಿ ಬಟ್ಟೆ ನೇಯುವುದನ್ನು ಮುಂದುವರಿಸು ” ಎಂದು ಶಿವನೇ ಬಂದೆದುರು ಹೇಳಿದ ಅನುಭವ ಅವರಿಗಾದುದು ಅವರಲ್ಲಿ ಆಧ್ಯಾತ್ಮಿಕ ವಿಚಾರಗಳ ಮತ್ತು ಭಕ್ತಿಯ ತೀವ್ರತೆ ಎಷ್ಟಿತ್ತೆಂಬುದಕ್ಕೆ ಸಾಕ್ಷಿ.
ಪತಿ ಮತ್ತು ಪತ್ನಿ ತಾವು ನೇಯ್ದ ಮೊದಲ ಚಾದರವನ್ನು ಶಿವನೇ ಜಂಗಮನ ರೂಪದಲ್ಲಿ ಬಂದು ಪಡೆದ ಎನ್ನುವ ಉಲ್ಲೇಖವೂ ಇದೆ.
ಮುಂದೆ ನಿಲ್ಲದ ಕಾಯಕ ದಾಸಿಮಯ್ಯ – ಪತ್ನಿ ದುಗ್ಗಳೆಯಿಂದ. ತಮ್ಮ ಬಾಳನ್ನೇ ಶ್ರದ್ಧೆ – ಭಕ್ತಿಯಿಂದ ಮುಖ್ಯವಾಗಿ ಸೀರೆ ನೇಯುವ ಕಾಯಕಕ್ಕೆ ಸಮರ್ಪಿಸಿಕೊಂಡರು. ಆಗಲೇ ಈ ಸೀರೆಯ ಉದ್ಯಮ ಇತ್ತು ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಿಲ್ಲ.
ಕೈ ಮಗ್ಗದ ಸೀರೆಯುಡುವ ಸುಂದರಿಯರು, ಬೈರಾಸು, ಪಂಚೆ ಬಳಸುವ ಪುರುಷರು ಇದ್ದರೆಂದಾಯಿತು ಇತಿಹಾಸದ ಪುಟ ತಿರುವಿದಾಗ.
ಇನ್ನೂ ಸ್ವಲ್ಪ ಹಿಂದಕ್ಕೆ ಹೋಗಿ ನಿಧಾನವಾಗಿ ವರ್ತಮಾನದತ್ತ ಬರುವ.
ಹಿಂದಕ್ಕೆ ಸರಿದಾಗ ಸಿಂಧೂ ನದಿ ಕಣಿವೆ ನಾಗರೀಕತೆಯತ್ತ ದೃಷ್ಟಿ ಹಾಯಿಸಲೇ ಬೇಕು. ಆಗಲೇ ಕೈಯಿಂದ ಬಟ್ಟೆ ತಯಾರಿಸುವ ಪರಿಣತಿ ಇತ್ತೆಂಬುದು ಸೋಜಿಗ. ಅದೇ ಅಲ್ಲವೇ ನಾಗರೀಕತೆ ಎಂದರೆ ?( ಶೋಹ)
ಮುಂದಿನ ಭಾಗ ನಿರೀಕ್ಷಿಸಿ
( ಕಂಡದ್ದು – ಕೇಳಿದ್ದು – ಓದಿದ್ದು)
ಶೋಭಾ ಹರಿಪ್ರಸಾದ ಶೆಟ್ಟಿಗಾರ ಉಡುಪಿ
