![]()
ಸ್ತ್ರೀ ಅಥವಾ ಮಹಿಳೆ ಎಂದರೆ ಸೃಷ್ಟಿ. ಆಕೆಯದ್ದು ವಿವಿಧ ರೂಪ. ಹಿರಿಯರು – “ಕಾರ್ಯೇಷು ದಾಸಿ, ಸಲಹೇಷು ಮಂತ್ರಿ, ಭೋಜೇಷು ಮಾತಾ, ಶಯನೇಷು ರಂಭಾ ನಾರಿ ಕ್ಷಮಯಾಧರಿತ್ರಿ” ಎಂದಿದ್ದಾರೆ.
ವೇದ – ಪುರಾಣಗಳಲ್ಲಿ , ಮಹಾ ಕಾವ್ಯಗಳಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನ ಮಾನವಿತ್ತು. ಆಕೆ ಸಹನಾಮಯಿ. ಆಕೆ ಆದಿ ಶಕ್ತಿ. ದುಷ್ಟರ ಶಿಕ್ಷಕಿ – ಶಿಷ್ಟರ ರಕ್ಷಕಿ.
‘ ಒಲಿದರೆ ನಾರಿ , ಮುನಿದರೆ ಮಾರಿ “. “ಹೆಣ್ಣಿಗೆ ಹೆಣ್ಣು ಶತ್ರು, – ಇಂದು ಮಹಿಳೆಯರ ಬಗ್ಗೆ ಕೇಳಿ ಬರುವ ನುಡಿಗಳು. ಒಬ್ಬ ಮಹಿಳೆ ಒಂದು ಮನೆಯನ್ನು ಬೆಳಗ ಬಲ್ಲಳು.ಇಲ್ಲವೇ ಆ ಮನೆಯ ಶಾಂತಿಯನ್ನು ಕಳೆಯ ಬಲ್ಲಳು.
ಲೆಕ್ಕಾಚಾರ ಹಾಕ ಹೋದರೆ ಅರಿತೋ ಅರಿಯದೆಯೋ ಮಹಿಳೆಯರಲ್ಲಿ ಸದ್ಗುಣ – ದುರ್ಗುಣವೆರಡೂ ಇರುವುದನ್ನು ಕಾಣುತ್ತೇವೆ. ನಾವು ನಮ್ಮನ್ನು ಅವಲೋಕನ ಮಾಡಿಕೊಂಡಾಗ ಯಾವುದೇ ಕ್ಷೇಶವಿಲ್ಲದ ಶಾಂತಿಯುತ ಜೀವನದತ್ತ ಸಾಗುವುದು ಬಹಳ ಸುಲಭ.
ಬಿಡುವಿನ ಸಮಯದ ಸದುಪಯೋಗ ಪಡೆಯಲು ಇಂದು ಹಲವು ಮಾರ್ಗಗಳು ನಮ್ಮ ಮುಂದಿವೆ. ಈ ಮುಂದುವರಿದ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಮಹಿಳೆ ತನ್ನೊಳಗಿನ ಶಕ್ತಿ ತಾನು ಅರಿತುಕೊಳ್ಳದೆ ಆತ್ಮವಿಶ್ವಾಸ ಇದ್ದರೂ ಇಲ್ಲದವಳಂತೆ ನಡೆದುಕೊಳ್ಳುತ್ತಿರುವ ನಿದರ್ಶನಗಳು ಸಾಕಷ್ಟು.
ಸಂಸಾರ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆ ತನಗಾಗಿ ಒಂದಷ್ಟು ಸಮಯ ವಿನಿಯೋಗಿಸಲಿ ಎಂಬ ಕಾರಣಕ್ಕಾಗಿಯೇ ಆಕೆಯಲ್ಲಿ ಅರಿವನ್ನು ಮೂಡಿಸಲು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರತಿ ವರ್ಷ ಮಾರ್ಚ್ ಎಂಟರಂದು ನಡೆಯಲ್ಪಡುತ್ತಿದೆ. ವರ್ಷದ ಪ್ರತಿಯೊಂದು ದಿನವೂ ಮಹಿಳೆಯರ ದಿನ ಎಂಬುದನ್ನು ನಾವು ಮರೆಯ ಬಾರದು. ಮಾರ್ಚ್ ಎಂಟಕ್ಕೆ ಮಾತ್ರವಲ್ಲ ವರ್ಷದಲ್ಲಿ ಆಗಾಗ ಮಹಿಳೆಯರ ಸ್ನೇಹ ಕೂಟ ನಡೆಯುತ್ತಿರ ಬೇಕು. ನಮ್ಮೊಳಗಿನ ಚಿಂತನೆಗಳು ಧನಾತ್ಮಕವಾಗಿ ಇದ್ದಾಗ ಒಬ್ಬರೊಡನೆ ಒಬ್ಬರು ಬೆರೆತು ಬಾಳುವುದು ಹಿತವೆನಿಸುವುದು. ನಮ್ಮೊಳಗಿನ ಸದ್ಗುಣಗಳು ಇನ್ನೋರ್ವರಿಗೆ ಮಾದರಿಯಾಗಿರ ಬೇಕು.
ಅಯ್ಯೋ ! ಬಾಲ್ಯ ಮುಗಿಯಿತು ,ಮದುವೆಯಾಯಿತು ,ಹೊಣೆ ಹೆಗಲೇರಿತು ,ವಯಸ್ಸಾಯಿತು ,ಜೀವನ ಮುಗಿದೇ ಹೋಯಿತು ..ಅರರೇ ! ಇನ್ನೇನು ಉಳಿಯಿತು. ಹೋದ ಮೇಲೆ ಮರಳಿ ಬರಲು ಸಾಧ್ಯವೇ ? ಇರುವಾಗ ಚಿಕ್ಕ ಪುಟ್ಟದ್ದಕ್ಕೆ ತಲೆ ಕೆಡಿಸಿಕೊಂಡು , ಪರಿಹಾರ ಇಲ್ಲದ ಸಮಸ್ಯೆಗಳಿಗಾಗಿ ಒದ್ದಾಡಿ ,ಗುದ್ದಾಡಿ ನಡೆಸುವ ಜೀವನ ಜೀವನವೇ ?
ಸ್ವ ಸಮಾಜದ ಮಹಿಳಾ ಬಂಧುಗಳಿಗಾಗಿ ಇದೇ ಬರುವ ಮಾರ್ಚ್ 9 ರಂದು ಕಿನ್ನಿ ಮುಲ್ಕಿ ಶ್ರೀವೀರ ಭದ್ರ ಶ್ರೀ ಶಾಂತದುರ್ಗಾ ಶ್ರೀ ಮಹಾ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮ ‘ ಚೈತನ್ಯ ನಡೆಯಲಿರುವುದು. ಸಮಯ ಬೆಳಿಗ್ಗೆ 9.00 ರಿಂದ ಸಂಜೆ 4.30 ರ ತನಕ.
ಸಂಪನ್ಮೂಲ ವ್ಯಕ್ತಿಗಳಾದ ಡಾ. ವಸುಧಾ ಮತ್ತು ಡಾ. ಮೀನಾಕ್ಷಿ ರಾಮಚಂದ್ರ ಇವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಇದೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಮಾತೆಯರಿಗೆ ಗೌರವ ಸನ್ಮಾನ ಮಾಡುವವರಿದ್ದೇವೆ ,ಮಹಿಳೆಯರಿಂದ ವೈವಿಧ್ಯಮಯ ಪ್ರತಿಭಾ ಪ್ರದರ್ಶನವೂ ಇದೆ.
ನನ್ನೆಲ್ಲ ಮಹಿಳಾ ಸಹೋದರಿಯರಲ್ಲಿ ವಿನಂತಿ – ಇದು ತಮ್ಮೆಲ್ಲರ ಕಾರ್ಯಕ್ರಮ. ತಮ್ಮೆಲ್ಲರ ಉಪಸ್ಥಿತಿ ಬಯಸುತ್ತಿರುವೆ
ಪ್ರೀತಿಯ ಆಹ್ವಾನಕ್ಕೆ ಪ್ರೀತಿಯ ಸ್ಪಂದನೆ ಇರಲಿ
ಶ್ರೀಮತಿ ಶೋಭಾ ಹರಿಪ್ರಸಾದ
{ಮಹಿಳಾ ವೇದಿಕೆಯ ಸಂಚಾಲಕಿ}

ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು
ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ( ರಿ)
