ನಾರಾಯಣ ಸೇವಾ ಸಮಿತಿಯವರು 2025 ರ ಜನವರಿ 11ರಂದು ದುಬೈನಲ್ಲಿ ಜಿ.ಎಸ್. ಎಸ್ ಪ್ರೈವೇಟ್ ಶಾಲೆಯಲ್ಲಿ ಅಖಂಡ ಭಜನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದರು. ಈ ಅವಧಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿರುವ ಪ್ರತಿಷ್ಠಿತ ಭಜನಾ
ಮಂಡಳಿಗಳು ಭಾಗವಹಿಸಿ ಭಜನೆ ಕಾರ್ಯಕ್ರಮವನ್ನು ಸಡಗರದಿಂದ ನಡೆಸಿದರು. ಈ ಅಖಂಡ ಭಜನಾ ಮಹೋತ್ಸವವು ಬೆಳಗ್ಗೆ ೭ ಗಂಟೆಯಿಂದ ಪ್ರಾರಂಭವಾಗಿ ಅವಿರತವಾಗಿ ಸಂಜೆ ೬.೩೦ ಯ ವರೆಗೆ ನಡೆಯಿತು. ನಂತರ ಸಂಭ್ರಮದ ಲಾಲ್ಕಿ ಉತ್ಸವ, ಮಹಾಮಂಗಳಾರತಿ, ಮಹಾಪ್ರಸಾದದೊಂದಿಗೆ ಸಂಪೂರ್ಣಗೊಂಡಿತು. ಕಾರ್ಯಕ್ರಮಕ್ಕೆ ಬಂದಂತಹ ಎಲ್ಲ ಭಕ್ತಾದಿಗಳಿಗೆ ದಿನಾ ಪೂರ್ತಿ ಸ್ವಾದಿಷ್ಟಕರವಾದ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಭಜನಾ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಹಾಗೂ ಪದ್ಮಶಾಲಿ ಸದಸ್ಯರನ್ನೊಳಗೊಂಡ ಪದ್ಮಶಾಲಿ ಸಮುದಾಯದ ಭಜನಾ ತಂಡವು ಶ್ರದ್ಧೆ ಮತ್ತು ಭಕ್ತಿಯಿಂದ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು. ಪದ್ಮಶಾಲಿ ಸದಸ್ಯರು ಹಾಗೂ ಮಕ್ಕಳ ಈ ಭಜನೆಗಳು ಎಲ್ಲರ ಹೃದಯಗಳನ್ನು ಮುಟ್ಟಿದವು ಹಾಗು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮನೀಶ್ ಪದ್ಮಶಾಲಿ ಮತ್ತು ಗಾಯತ್ರಿ ಮನೀಶ್ ದಂಪತಿಗಳು ಪದ್ಮಶಾಲಿ ಸದಸ್ಯರನ್ನು ಪ್ರತಿನಿಸಿದ್ದರು. ಮನೋಹರ ಶೆಟ್ಟಿಗಾರ್ ರವರು ಪದ್ಮಶಾಲಿ ಭಜನಾ ಮಂಡಳಿಯ ಸಂಘಟನೆಯ ಉಸ್ತುವಾರಿಯನ್ನು ವಹಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಪದ್ಮಶಾಲಿ ಸದಸ್ಯರಿಗೆ ಸಂಘಟಕರು ಧನ್ಯವಾದಗಳನ್ನು ಸಲ್ಲಿಸಿದರು. ಪದ್ಮಶಾಲಿ ಭಜನಾ ತಂಡಕ್ಕೆ ಕೊಡಮಾಡಿದ ಈ ಅವಕಾಶಕ್ಕಾಗಿ ನಾರಾಯಣ ಸೇವಾ ಸದಸ್ಯರನ್ನು ಅಭಿನಂದಿಸಲಾಯಿತು.
ಈ ರೀತಿಯ ಕಾರ್ಯಕ್ರಮಗಳು ದುಬೈನಲ್ಲಿ ನೆಲೆಸಿರುವ ಪದ್ಮಶಾಲಿ ಸಮುದಾಯಕ್ಕೆ ಅವರ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಉಳಿಸಿಕೊಂಡು ಸಾಗಲು ಸಹಾಯ ಮಾಡುವುದರ ಜೊತೆಗೆ, ಸಮುದಾಯದ ಒಗ್ಗಟ್ಟನ್ನು ಮತ್ತಷ್ಟು ಉತ್ತಮಗೊಳಿಸಲು ಸಹಕಾರಿಯಾಗಿದೆ.