
ಉಡುಪಿ ಜಿಲ್ಲಾ ಆಡಳಿತದ ನಿರ್ದೇಶನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಡಾ. ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ದಿನಾಂಕ 02-04-2025ನೆಯ ಬುಧವಾರ ಆಚರಿಸಲಾಯಿತು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ದಿನಕರ ಹೇರೂರುರವರು ಸಮಾರಂಭವನ್ನು ಉದ್ಘಾಟಿಸಿ ನಾಡು ಮತ್ತು ನುಡಿಗೆ ಸೇವೆ ಸಲ್ಲಿಸಿದ ದೇವರ ದಾಸಿಮಯ್ಯ ರ ಹಿರಿಮೆಯನ್ನು ಗುರುತಿಸಿ ಗೌರವಿಸ ಬೇಕೆಂದು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಅಬಿದ್ ಗದ್ಯಾಳರವರು ವಹಿಸಿದ್ದರು. ನೇಕಾರರು ಸುತ್ತುವ ನೂಲಿನ ಎಳೆಯಂತೆ ನಾವು ಸಣ್ಣವರೆಂದು ತಿಳಿದು ವಿಶಾಲವಾದ ಹಾಗೂ ಅಗಾಧವಾದ ಪ್ರಪಂಚದಲ್ಲಿ ದೊಡ್ಡದಾದ ಸಾಧನೆಯನ್ನು ಮಾಡಿ ಎತ್ತರಕ್ಕೆ ಏರಬೇಕೆಂದು ಸಾಧು ಸಂತರು ಉಪದೇಶಿಸಿದ್ದಾರೆಂದೂ ಅವರ ಆದರ್ಶವನ್ನು ಪಾಲಿಸಬೇಕೆಂದೂ ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು. ದಾಸಿಮಯ್ಯರು ಕಾಯಕವೇ ಕೈಲಾಸ ಎಂಬ ತತ್ವವನ್ನು ಸಾರಿದ ಸಂತರೆಂದು ತಿಳಿಸುತ್ತ ಕಾಯಕದಲ್ಲಿ ಪರಿಶುದ್ಧಿಯನ್ನು ಕಾಯ್ದುಕೊಂಡು ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸರಾವ್ ರವರು ಮುಖ್ಯ ಅಭ್ಯಾಗತರಾಗಿ ಮಾತನಾಡುತ್ತ ದೇವರ ದಾಸಿಮಯ್ಯರು ಕೆಲಸದಲ್ಲಿ ದೇವರನ್ನು ಕಂಡವರೆಂದು ಪ್ರಶಂಸಿಸಿ ಅವರ ಬಾಳು ನಮಗೆಲ್ಲ ಆದರ್ಶವೆಂದು ತಿಳಿಹೇಳಿದರು ಪದ್ಮಶಾಲಿ ಮಹಾಸಭಾದ ಅಧ್ಯಕ್ಷರಾದ ಶ್ರೀರವಿ ಶೆಟ್ಟಿಗಾರ್ ಕಾರ್ಕಳರವರು ಉಪಸ್ಥಿತರಿದ್ದು ದೇವರ ದಾಸಿಮಯ್ಯ ಜಯಂತಿಯನ್ನು ಮುಂದಿನ ವರ್ಷಗಳಲ್ಲಿ ಮಹಾಸಭಾದ ಆಶ್ರಯದಲ್ಲಿ ಆಚರಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು
ವಿಶ್ರಾಂತ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾದ ಶ್ರೀ ಗಿರೀಶ ಶೆಟ್ಟಿಗಾರರು ದಾಸಿಮಯ್ಯರ ಜೀವನ ಮತ್ತು ತತ್ವಗಳ ಕುರಿತಾದ ವಿಸ್ತೃತವಾದ ಉಪನ್ಯಾಸವನ್ನು ನೀಡಿದರು. ದಾಸಿಮಯ್ಯರು ನೇಕಾರಸಮಾಜದ ಶ್ರೇಷ್ಥಸಂತರೆಂದು ಅವರ ವಚನಗಳನ್ನು ಉದಾಹರಿಸಿ ಹೃದಯಂಗಮವಾಗಿ ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾರವರು ಸ್ವಾಗತಿಸಿದರು. ವಿದ್ಯಾ ವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಲಕ್ಷ್ಮಣ್ ಕೊಡಿಯಾಲ್ ಬೈಲ್ ರವರು ಉಪಸ್ಥಿತರಿದ್ದರು. ಶ್ರೀ ಎಂ. ಜಯರಾಮ್ ಮಂಗಳೂರುರವರು ವಂದಿಸಿದರು. ದೇವರ ದಾಸಿಮಯ್ಯರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
