ಮಾಲಿಕೆ -೧ : ಶ್ರೀಮತಿ ಕಲ್ಯಾಣಿಯಮ್ಮ
ಹಣೆಯ ಮೇಲೆ ಅಗಲವಾದ ಬೊಟ್ಟಿಟ್ಟು , ಲಕ್ಷಣವಾಗಿ ಸಿಂಗರಿಸಿಕೊಂಡು ಕೈಯ್ಯಲ್ಲಿ ಹಣ್ಣು ಕಾಯಿ ಬುಟ್ಟಿ ಹಿಡಿದು ದೇವಸ್ಥಾನಕ್ಕೆ ಬರುತ್ತಿದ್ದ ಕಲ್ಯಾಣಿಯಮ್ಮನವರನ್ನು ನೋಡುವುದೇ ಖುಷಿ. ಸುಂದರವಾದ ನಗು ಮೊಗದ ಚೆಲುವೆ. ಚಿಕ್ಕವಳಾಗಿದ್ದ ನನಗೆ ಇದಕ್ಕಿಂತ ಹೆಚ್ಚು ನೆನಪಿಲ್ಲ.
ಹೆಚ್ಚಿನ ವಿದ್ಯಾಭ್ಯಾಸ – ಉದ್ಯೋಗಕ್ಕೆಂದು ದೂರ ಹೋದ ಬಳಿಕ ಇವರ ಭೇಟಿಯೇ ಆಗಿರಲಿಲ್ಲ. ಸಹೋದರಿ ಸ್ವರ್ಣ ಲತಾ ಒಂದು ಭಾವ ಚಿತ್ರ ಕಳುಹಿಸಿ ಇವರು ” ಕಲ್ಯಾಣಿಯತ್ತೆ. ನನ್ನ ಯಜಮಾನರ ದೊಡ್ಡಮ್ಮ. ” ಎಂದಾಗ ಆ ಚಿತ್ರ ನೋಡಿ ಗುರುತು ಹಿಡಿದಿದ್ದೆ. ಅಲ್ಪ ಸ್ವಲ್ಪ ಬದಲಾಗಿದ್ದ ಅದೇ ಸುಂದರ ಚಹರೆ. ಬಹಳ ಖುಷಿಯಾಯಿತು.
ವಯಸ್ಸು ಹೆಚ್ಚಲ್ಲ ಬರೇ ತೊಂಬತ್ತಾರು. 1928 ರಲ್ಲಿ ಉಡುಪಿಯ ಮೂಡನಿಡಂಬೂರಿನಲ್ಲಿ ಜನಿಸಿದ್ದ ಕಲ್ಯಾಣಮ್ಮ ಉತ್ಸಾಹದ ಚಿಲುಮೆ.. ಅವರೇ ಹೇಳುವಂತೆ ಹದಿನಾರನೇ ವಯಸ್ಸಿಗೆ ಮದುವೆ. ಅವರ ಕೈ ಹಿಡಿದ ಸಜ್ಜನ ಸಾಲಿಕೇರಿ ಭಂಡಾರ್ರ ಕುಟುಂಬದ ನಾರಾಯಣ ಶೆಟ್ಟಿಗಾರರು ನೇಕಾರಿಕೆ ಮತ್ತು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು.
ಸಾಲಿಕೇರಿಯ ತುಂಬು ಕುಟುಂಬವೊಂದಕ್ಕೆ ಎರಡನೇ ಸೊಸೆಯಾಗಿ ಬಂದ ಕಲ್ಯಾಣಿಯಮ್ಮನವರು ತಾನು ಕೂಡಾ ಕೃಷಿ ಮತ್ತು ನೇಕಾರಿಕೆಯತ್ತ ಒಲವು ತೋರಿದ್ದರು ಮಾತ್ರವಲ್ಲದೆ ಮುಂದೆ ಸಂಸಾರ ನಿರ್ವಹಣೆಯಲ್ಲಿ ಪತಿಗೆ ಹೆಗಲಾಗಿದ್ದರು. ಈಗವರ ಪತಿ ನಿಧನ ಹೊಂದಿರುವರು. ಪತಿಯ ನಿಧನದ ಬಳಿಕ ಹಿರಿಯ ಪುತ್ರ ಶ್ರೀ ಸುಂದರ ಶೆಟ್ಟಿಗಾರರೊಂದಿಗೆ ಇರುವ ಕಲ್ಯಾಣಿಯಮ್ಮನಿಗೆ ಎಂಟು ಮಕ್ಕಳು. ಆಗಿನ ಕಷ್ಟದ ಕಾಲದಲ್ಲೂ ತಮ್ಮೆಲ್ಲ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಎಲ್ಲರೂ ಸಂತೃಪ್ತ ಜೀವನ ಕಂಡುಕೊಳ್ಳುವಂತೆ ಮಾಡಿರುವುದು ನಾರಾಯಣ ಶೆಟ್ಟಿಗಾರ ದಂಪತಿಗಳ ಹೆಗ್ಗಳಿಕೆ
ಮೃದು ಹೃದಯಿ ಕಲ್ಯಾಣಿಯಮ್ಮನವರು ಈಗಲೂ ಬಂದವರ ಗುರುತು ಹಿಡಿಯುವರು ಮಾತ್ರವಲ್ಲದೆ ಮನೆ ಮಂದಿಯ ಬಗ್ಗೆಯೂ ವಿಚಾರಿಸುತ್ತಾರೆ. ವಯೋವೃದ್ಧರಾದ ಇವರು ಮೂರು ವರ್ಷದ ಹಿಂದೆ ಬಿದ್ದು ಕಾಲಿಗೆ ಏಟಾಗಿದೆ. ಚಿಕಿತ್ಸೆಗೆ ಸ್ಪಂದಿಸಿಲ್ಲ ಕಾಲು. ಹೀಗಾಗಿಲ ನಡೆಯಲು ಸಾಧ್ಯವಾಗುತ್ತಿಲ್ಲ. ಆದರೂ ಅವರ ಮೊಗದಲ್ಲಿ ಎದ್ದು ಕಾಣುವ ಲವಲವಿಕೆ ಇತರರಿಗೆ ಸ್ಪೂರ್ತಿ ಕೊಡುವಂಥದ್ದು ಆಗಿದೆ.
ಇಂದವರಿಗೆ ಹದಿಮೂರು ಮೊಮ್ಮಕ್ಕಳು ಮತ್ತು ಹತ್ತು ಮರಿ ಮಕ್ಕಳು ಇರುವರು. ಮೊಮ್ಮಕ್ಕಳೆಲ್ಲರೂ ಅತ್ಯುನ್ನತ ಪದವಿಯಲ್ಲಿ ಇರುವರು. ಮಕ್ಕಳ ,ಮೊಮ್ಮಕ್ಕಳ ಕಾಳಜಿಯಿಂದ ಹಿರಿಯಮ್ಮನ ಆರೋಗ್ಯ ವೃದ್ಧಿಸಲಿ.ಶ್ರೀ ದೇವರು ಎಂದಿನಂತೆ ಮುಂದೆಯೂ ಹರಸಲಿ.
ಮಾಹಿತಿ ಸಹಕಾರ : ಸ್ವರ್ಣಾ ಲತಾ ಮಹೇಶ್
ಲೇಖನ ಬರೆಹ : ಶೋಭಾ ಹರಿಪ್ರಸಾದ ಶೆಟ್ಟಿಗಾರ