![]()
ಯಾವೊಬ್ಬ ಕವಿಯಾಗಲಿ ಬರೆಯಬೇಕೆಂದಿರುವ ವಿಷಯದ ಬಗ್ಗೆ ಪರಿಪೂರ್ಣವಾಗಿ ಅರಿತು ಆಸಕ್ತಿಯಿಂದ ಬರೆಯಲು ಕುಳಿತಾಗಷ್ಟೆ ಆ ಕವಿಯಿಂದ ಅದ್ಭುತ ಬರೆಹಗಳನ್ನು ಬರೆಯಲು ಸಾಧ್ಯ. ಅಂತಹ ಮಹತ್ಕಾರ್ಯವನ್ನು ಶ್ರೀಮತಿ ಶೋಭಾಹರಿಪ್ರಸಾದರವರು “ಶೋಭಾ ರಾಮಾಯಣ”ವೆಂಬ ಮಹಾಕಾವ್ಯವನ್ನು ಭಾಮಿನಿ ಷಟ್ಪದಿ ಯಲ್ಲಿ ಅತ್ಯುತ್ತಮವಾಗಿ ಬರೆಯುವುದರ ಮೂಲಕ ತಮ್ಮ ಅದ್ಭುತ ಬರೆಹದ ವೈಖರಿಯನ್ನು ತೋರಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ.
ಬಹಳ ಖುಷಿಯಲಿ ರಾಮ ಕಥೆಯನು
ಲಹರಿಯಂತೆಯೆಲೋದಿ ಮುಗಿಸಲು
ಮಹಿಯ ಮೇಲಣ ದಿವ್ಯ ಚರಿತೆಯು ಪೂಜ್ಯವೆನಿಸುತಿದೆ
ಕಹಳೆಯೂದುತ ಸೀತ ರಾಮರ
ಸಹನ ಗುಣಗಳು ಸತ್ಯಸಂಧತೆ
ಗಹನ ವಿಷಯವ ತಿಳಿದು ಮನವು ಹರ್ಷವಾಗುತಿದೆ…
ಅಬ್ಬ.! ಸೋದರಿ ಶೋಭ ಬರೆದಿಹ
ಹಬ್ಬದಂತಹ ರಾಮ ಚರಿತೆಯು
ನಿಬ್ಬೆರಗು ಹುಟ್ಟಿಸಿರಲೆನಗೀ ಗ್ರಂಥ
ಮನದೊಳಗೆ
ಉಬ್ಬರದ ಮನ ಹರ್ಷಿಸುತ್ತಲಿ
ಕಬ್ಬವೋದುತ ವಿಷಯವರಿಯುತ
ತಬ್ಬಿಕೊಂಡೆನು ರಾಮ ಚರಿತೆಯ
ಹೃದಯದೊಳಗೆನ್ನ.
ನಾನು ಇವರ ಬರೆಹಗಳ ಅಭಿಮಾನಿ.ಇವರ ಬರೆಹ ಓದುತ್ತಿದ್ದರಂತು ಖುಷಿಯೋ ಖುಷಿ.ಇವರೊಬ್ಬ ಅದ್ಭುತ ಸಾಹಿತಿ, ಪ್ರಬುದ್ಧ ಬರಹಗಾರ್ತಿ, ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಬರೆದು ಹೆಸರುವಾಸಿಯಾಗಿರುವ ಶ್ರೀಮತಿ ಶೋಭಾ ಹರಿಪ್ರಸಾದರವರು ತಾವು ಬೆಳೆದು ಇತರರನ್ನೂ ಬೆಳೆಸೊ ಗುಣವಿರುವ ಹೆಮ್ಮೆಯ ಸಾಹಿತಿ..
‘ ರಾಮಾಯಣ ‘ ಒಂದು ಪರಿಶುದ್ಧ ಮಹಾಕಾವ್ಯ. ರಾಮ ನಾಮವೆಂಬುವುದು ಭಾರತೀಯ ಜನಮಾನಸದಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿರುವುದು. ಹಿಂದಿನ ಕಾಲದಲ್ಲಿ ರಾಮಾಯಣದ ಪಾತ್ರಧಾರಿಗಳ ಕಥೆಗಳು ಅನೇಕ ಲೋಗರಲ್ಲಿ ಬಾಯಿಯಿಂದ ಬಾಯಿಗೆ ಹರಿದಾಡುತ್ತಿದ್ದವೆಂಬುದನ್ನು ನಾವು ನೀವೆಲ್ಲಾ ಕೇಳಿರುವಿರಿ.ಈ ಕಥೆಯನ್ನು ಹೇಳುವ ಮತ್ತು ಕೇಳುವ ಇಬ್ಬರ ಅಂತರಂಗದಲ್ಲಿಯೂ ರಾಮನ ಅಂಶ ಗೋಚರವಾಗುತ್ತಿದ್ದವು. “ಕಾಲಾಯಾ ತಸ್ಮೈ ನಮಃ” ಎಂಬಂತೆ ಕಾಲ ಬದಲಾದಂತೆಲ್ಲ ರಾಮಾಯಣ ಮಹಾಕಾವ್ಯದ ಮೇಲೆ ಸಾಕಷ್ಟು ವಿಮರ್ಶೆಗಳು, ಜಿಜ್ಞಾಸೆಗಳು ನಡೆಯುತ್ತಲೆ ಇವೆ. ರಾಮಾಯಣ ಮಹಾಕಾವ್ಯವನ್ನು ವಾಲ್ಮೀಕಿ ಮುನಿಗಳು ಬರೆದ ಆನಂತರದಲ್ಲಿ ಅದೆಷ್ಟೋ ಕವಿ ಮಹಾಶಯರು ತಮ್ಮದೆ ಆದ ವಿಭಿನ್ನ ಶೈಲಿಯಲ್ಲಿ ಬರೆದಿರುವುದು ಉಂಟು. ಇಂತಹ ಪರಿಶುದ್ಧ ಕಾವ್ಯ ರಾಮಾಯಣವನ್ನು ಶ್ರೀಮತಿ ಶೋಭಾ ಹರಿಪ್ರಸಾದರವರು ಭಾಮಿನಿ ಷಟ್ಪದಿಯಲ್ಲಿ ; ಎಂತವರೂ ಓದಿ ಅರ್ಥೈಸಿಕೊಳ್ಳುವ ಮಟ್ಟಿಗೆ ಅರ್ಥಪೂರ್ಣವಾಗಿ ರಚಿಸಿರುವುದು ತುಂಬಾ ಖುಷಿಯಾಗಿರುತ್ತದೆ.
ಕವಯತ್ರಿ ಶೋಭಾ ಹರಿಪ್ರಸಾದ್ ರವರು ರಚಿಸಿರುವ ‘ಶೋಭಾ ರಾಮಾಯಣ ‘ದ ಶ್ರೀರಾಮ ಚರಿತೆಯಲ್ಲಿ ಎಲ್ಲ ಪಾತ್ರಗಳಿಗೂ ನ್ಯಾಯ ಒದಗಿಸಲಾಗಿದ್ದು, ಎಲ್ಲಾ ಪ್ರಸಂಗಗಳು ಕೂಡ ಅರ್ಥಪೂರ್ಣವಾಗಿ ಹೊರ ಹೊಮ್ಮಿವೆ ಎಂದೇ ಹೇಳಬಹುದು. ಆದ್ದರಿಂದ ಇದೊಂದು ಪರಿಪೂರ್ಣ ಮಹಾಕಾವ್ಯವಾಗಿದೆ ಎಂದರೆ ತಪ್ಪಾಗಲಾರದು. ಇವರು ಬರೆದಿರುವ ಈ ಮಹಾಕಾವ್ಯವನ್ನು ಪ್ರೌಢಶಾಲಾ ಮಕ್ಕಳು ಕೂಡಾ ಅತ್ಯಂತ ಸರಳವಾಗಿ ಅರ್ಥೈಸಿಕೊಳ್ಳಬಹುದಾಗಿದೆ. ರಾಮಾಯಾಣದಲ್ಲಿ ಬರುವ ಸಪ್ತಕಾಂಡಗಳ ಬಗ್ಗೆ ಒಂದರ ನಂತರ ಒಂದೊಂದನ್ನು ಎಲ್ಲಿಯೂ ತಪ್ಪದಂತೆ ,ಯಾವ ಕಥೆಯು ನಿಲ್ಲದಂತೆ ನಿರಂತರತೆ, ನಿರರ್ಗಳತೆಯನ್ನು ಕಾಯ್ದುಕೊಂಡು ಸಾಗಿರುವ ಈ ಮಹಾಕಾವ್ಯ ಓದುತ್ತಿದ್ದರೆ ಎಂತವರಿಗೂ ಓದಬೇಕೆನಿಸುತ್ತದೆ.
ಕವಯತ್ರಿಯವರು ರಚಿಸಿರುವ ಈ ರಾಮಾಯಣವನ್ನು ಏಳು ಕಾಂಡಗಳಾಗಿ ವಿಭಾಗಿಸಿಕೊಂಡಿದ್ದಾರೆ. ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂದಾ ಕಾಂಡ, ಸುಂದರ ಕಾಂಡ,ಯುದ್ಧಕಾಂಡ ಮತ್ತು ಉತ್ತರಕಾಂಡಗಳು.ಸನಾತನ ಸಂಸ್ಕೃತಿಯಲ್ಲಿ ಶ್ರೀರಾಮನನ್ನು ಪ್ರತಿಯೊಬ್ಬರು ಭಕ್ತಿಪೂರ್ವಕವಾಗಿ ಆರಾಧಿಸುವರು. ಏಕೆಂದರೆ ಈ ಗ್ರಂಥವು ಹಿಂದೂ ಪುರಾಣಗಳಲ್ಲಿ ಅತ್ಯಂತ ಗೌರವಾನ್ವಿತ ಮಹಾಕಾವ್ಯಗಳಲ್ಲಿ ಒಂದಾಗಿದ್ದು, ರಾವಣನಿಂದ ತನ್ನ ಪತ್ನಿ ಸೀತೆಯನ್ನು ರಕ್ಷಿಸಲು ಶ್ರೀರಾಮನು ಮಾಡಿದ ಹಾಗೂ ಅನುಭವಿಸಿದ ಚಿತ್ರಣವೆ ಈ ಕಥೆಯ ಸಾರವಾಗಿದೆ.ಈ ” ಏಳು ಕಾಂಡಗಳು” ಒಳಗೊಂಡಿರುವಂತೆ ರಾಮಾಯಣ ಆದಿ-ಕಾವ್ಯದೊಳಗೆ ಆದರ್ಶ ಪುರುಷನಾದ ಶ್ರೀರಾಮನ ಕಥೆಯನ್ನು ವಿವರಿಸಲಾಗಿದೆ.ಈ ರಾಮ ಚರಿತೆಯ ಒಳ ಹೊಕ್ಕಿದಾಗ ಒಂದೊಂದು ಕಾಂಡಗಳು ವಿಭಿನ್ನವಾಗಿ, ವಿಶೇಷವಾಗಿ ರಚಿತವಾಗಿರುವುದನ್ನು ನೋಡಿ ಮನಸ್ಸಿಗೊಂತರ ಖುಷಿಯಾಯಿತು.
ಬಾಲಕಾಂಡ…..
ಈ ಬೃಹದ್ಗ್ರಂಥದಲ್ಲಿ ಬರುವ ಮೊದಲ ಘಟ್ಟವೇ ಬಾಲಕಾಂಡ. ಇದು ರಾಮಾಯಣದ ಮುಂದೆ ಬರುವ ಹಲವಾರು ಘಟನೆಗಳಿಗೆ ಮುನ್ನುಡಿ ಬರೆಯುತ್ತದೆ. ಬಾಲಕಾಂಡ ಹೆಸರೇ ಸೂಚಿಸುವಂತೆ ದಶರಥ ಪುತ್ರರ ಜನನ ಹೇಗೆ ಎಂಬುದರ ವಿವರಣಾತ್ಮಕ ಮಾಹಿತಿಯನ್ನು ತುಂಬಾ ಸೊಗಸಾಗಿ ವಿವರಿಸಿದ್ದಾರೆ. ಕವಯತ್ರಿಯವರು ಬರೆದಿರುವ ಈ ರಾಮಾಯಣ ಗ್ರಂಥದಲ್ಲಿ ಪ್ರತಿಯೊಂದು ಪದ್ಯಗಳು ಕೂಡ ಅರ್ಥಪೂರ್ಣವಾಗಿವೆ.
ಚೆಂದದಿಂದಲೆ ನಡೆದ ಯಜ್ಞವು
ದಂದುಗದ ಚಣವನ್ನು ಮರೆಸುತ
ಬಂಧುರದ ಬಾಳುವೆಯ ನೀಡಿತು ಕಾಲ ಸರಿದಿರಲು
ಒಂದು ವರುಷವು ಮುಗಿವ ಹೊತ್ತಿಗೆ
ಬಂದಿತೆನ್ನಲು ಚೈತ್ರಮಾಸವು
ಕಂದ ರಾಮಗೆ ಜನನವಿತ್ತಳು ರಾಣಿ ಕೌಸಲ್ಯಾ||
ಅದೆಷ್ಟು ಚಂದವಾಗಿ ರಾಮನ ಜನನವನ್ನ ಈ ಭಾಮಿನಿಯಲ್ಲಿ ವರ್ಣಿಸಿರುವರು.
ದಶರಥ ಮಹಾರಾಜನಿಗೆ ಮೂವರು ಪತ್ನಿಯರು ಕೌಸಲ್ಯಾದೇವಿ ಮೊದಲ ಹೆಂಡತಿ. ಸುಮಿತ್ರಾದೇವಿ ಎರಡನೆಯ ಹೆಂಡತಿ ಮತ್ತು ಕೈಕೇಯಿ ಮೂರನೇ ಪತ್ನಿ. ದಶರಥನು ಸಂತಾನವಿಲ್ಲದೆ ಚಿಂತೆಗೆ ಗುರಿಯಾಗಿ ಹಿರಿಯರ ಸಲಹೆಯಂತೆ ಅಶ್ವಮೇಧ ಯಾಗ ಮಾಡಿದರ ಫಲ ಹಾಗು ಇವನ ಭಕ್ತಿಗೆ ಮೆಚ್ಚಿದ ದೇವದೂತನು ಪ್ರತ್ಯಕ್ಷನಾಗಿ ಒಂದು ಪಾತ್ರೆಯಲ್ಲಿ ಪಾಯಸವನ್ನು ನೀಡಿ ದಶರಥನ ಪತ್ನಿಯರಿಗೆ ನೀಡಲು ತಿಳಿಸುತ್ತಾನೆ. ಇದರ ಫಲವಾಗಿ, ಕೌಸಲ್ಯೆಯು ಚೈತ್ರಮಾಸದ ಶುದ್ದ ನವಮಿಯ ದಿನ ಪುನರ್ವಸು ನಕ್ಷತ್ರದಂದು ಗಂಡು ಮಗುವಿಗೆ ಜನ್ಮಕೊಡುತ್ತಾಳೆ.ಅವನೆ ಶ್ರೀರಾಮಚಂದ್ರ..ಈ ಭಾಗವನ್ನು ಮೇಲಿನ ಪದ್ಯದಲ್ಲಿ ಚನ್ನಾಗಿ ಅರುಹಿರುವರು.
ಮಾರನೆಯ ದಿನವಾದ ದಶಮಿಯ ದಿನ ಪುಷ್ಯ ನಕ್ಷತ್ರದಂದು ಕೈಕೇಯಿಯು ಗಂಡು ಮಗುವಿಗೆ ಜನ್ಮನೀಡುತ್ತಾಳೆ ಅವನೆ ಭರತ. ಅದೇ ದಶಮಿಯ ದಿನದಂದೇ ಸುಮಿತ್ರೆಯು ಅವಳಿ ಗಂಡುಮಕ್ಕಳಿಗೆ ಜನ್ಮ ನೀಡುತ್ತಾಳೆ. ಈ ನಾಲ್ಕೂ ಮಕ್ಕಳಿಗೆ ಕ್ರಮವಾಗಿ ರಾಮ, ಭರತ, ಲಕ್ಷ್ಮಣ ಮತ್ತು ಶತ್ರುಘ್ನ ಎಂದು ನಾಮಕರಣ ಮಾಡಲಾಗುತ್ತದೆ.ಹಾಗೆಯೇ ಇಲ್ಲಿ ವಿಶ್ವಾಮಿತ್ರರಿಗೆ ಶ್ರೀರಾಮನ ಮೇಲೆ ಇದ್ದ ವಾತ್ಸಲ್ಯಕ್ಕೆ ಅಕ್ಷರರೂಪದಂತೆ ಇರುವ ಶ್ಲೋಕ ‘ಕೌಸಲ್ಯಾ ಸುಪ್ರಜಾ ರಾಮಾ’. ಇಂದು ತಿರುಪತಿ ವೇಂಕಟೇಶ್ವರ ಸ್ವಾಮಿಯ ಸುಪ್ರಭಾತದ ಮೊದಲ ಶ್ಲೋಕವನ್ನು ಇಲ್ಲಿ ಸ್ಮರಿಸಿರುವುದನ್ನು ಗಮನಿಸಬಹುದು.
ಅಯೋಧ್ಯಾಕಾಂಡ….
ದಶರಥ ಪುತ್ರರ ಕಲ್ಯಾಣದ ನಂತರ ಅಯೋಧ್ಯೆಗೆ ಮರಳಿ ಕಾನನಕ್ಕೆ ತೆರಳುವ ಕಥೆಯನ್ನು ಈ ಭಾಗದಲ್ಲಿ ಅತ್ಯಂತ ಸರಳ ಸುಂದರವಾಗಿ ಚಿತ್ರಿಸಿರುವುದು ನಿಜಕ್ಕೂ ಖುಷಿಯ ವಿಷಯ.ಓದುತ್ತಿದ್ದರೆ ನನಗಂತು ಪುನಃ ಪುನಃ ಓದಬೇಕೆನಿಸುತಿತ್ತು. ಪ್ರತಿಯೊಬ್ಬರು ಓದಲೇ ಬೇಕಾದ ಕೃತಿಯಿದು. ಈ ಒಂದು ಕಾಂಡದಲ್ಲಿ ರಾಮನ ಪಟ್ಟಾಭಿಷೇಕಕ್ಕಾಗಿ ಸಿದ್ಧತೆ. ಕೈಕೇಯಿಯ ದಾಸಿ ಮಂಥರೆಯ ಕೇಡು ಬುದ್ಧಿ ಕೈಕೇಯಿಯ ತಲೆಯನ್ನು ಕೆಡಿಸಿ ರಾಮನ ಪಟ್ಟಾಭಿಷೇಕಕ್ಕೆ ಮುಳುವಾಗಿ ರಾಮ ಕಾಡಿಗೆ ಹೋಗುವ ಪ್ರಸಂಗದ ಮಾತುಗಳು ಈ ಪದ್ಯಭಾಗದಲ್ಲಿ ಅದ್ಭುತವಾಗಿ ರಚಿತವಾಗಿದೆ.
ನೇರ ಮಾತೊಳಗಿರಿದಳಾಕೆಯು
ವೀರ ದಶರಥನನ್ನು ನೋಡುತ
ಕೋರಿಕೊಂಡಿಹ ವರದಲಿದ್ದಿತು ಬರಿಯ ವಿಷದಂಶ |
ನಾರು ಮುಡಿಯನ್ನುಟ್ಟು ರಾಮನು
ಘೋರ ಕಾನನದೆಡೆಗೆ ಸಾಗುತ
ಕ್ರೂರ ಮೃಗಗಳ ನಡುವೆ ಕಳೆಯಲಿ ವರ್ಷ ಹದಿನಾಲ್ಕು||
ಮಂಥರೆಯ ಮಾತುಗಳಿಂದ ಕೈಕೇಯಿಯ ಅಟ್ಟಹಾಸ ಹಾಗೂ ಪಟ್ಟಾಭಿಷೇಕವನ್ನು ರಾಮನಿಂದ ಕಸಿದುಕೊಂಡು ಅವನನ್ನು ಹದಿನಾಲ್ಕು ವರ್ಷಗಳ ಕಾಲ ಕಾಡಿಗೆ ಕಳಿಸುವ ಅವಳ ಉದ್ದೇಶ ಈಡೇರುವ ಈ ಸಂಚಿಕೆಗಳು ನಿಜಕ್ಕೂ ಪ್ರತಿಯೊಂದನ್ನು ನೀವೆಲ್ಲ ಓದಲೇ ಬೇಕು.ಅಷ್ಟು ಪ್ರೇರಣದಾಯಕವಾದ ಕಥಾವಸ್ತುವಿನ ವಿಶ್ಲೇಷಣೆ ಚಂದವಿದೆ.
ಅರಣ್ಯ ಕಾಂಡ…….
ರಾಮ, ಲಕ್ಷ್ಮಣ ಮತ್ತು ಸೀತೆಯು ಅರಣ್ಯಕ್ಕೆ ಬರುವ ಹಾಗು ರಾಕ್ಷಸ ರಾಜ ರಾವಣನಿಂದ ಸೀತೆಯ ಅಪಹರಣದ ಬಗ್ಗೆ ಅರಣ್ಯಕಾಂಡವು ಚನ್ನಾಗಿ ಮೂಡಿಬಂದಿದೆ.ಸೀತೆಯು ರಾಕ್ಷಸ ರಾವಣನೊಂದಿಗೆ ಸಿಲುಕಿ ನರಳುವ ಯಾತನೆ, ಯೋಚನೆಗಳ ಸುತ್ತದ ಅರಿವು.ರಾಮ ಲಕ್ಷ್ಮಣರ ಬಂಧುರ ಬಾಂಧವ್ಯ,ರಾವಣನ ದರ್ಪ ಅಹಂಕಾರದ ಅಟ್ಟಹಾಸ.ಶೂರ್ಪನಖಿಯ ಕುಚೇಷ್ಟೆಗಳು ಅಸಮಧಾನಗಳು.ಇವರುಗಳ ನಡುವೆ ರಾಮ ಲಕ್ಷ್ಮಣರ ಸೆಣೆಸಾಟದ ಪ್ರಸಂಗಗಳು ತುಂಬಾ ಚನ್ನಾಗಿ ಮೇಳೈಸಿವೆ. ಹಾಗೆಯೇ ಮಾರೀಚನ ಚಿನ್ನದ ಜಿಂಕೆಯ ರೂಪದ ವೇಷ ಪ್ರವೇಶ,ರಾಮನ ಹುಡುಕಾಟ ಲಕ್ಷ್ಮಣ ಎಳೆದ ರೇಖೆ.ಲಕ್ಷ್ಮಣ ರೇಖೆಯ ಪರಿಚಯ,ಸೀತೆಯ ಅಪಹರಣ,ಜಟಾಯುವಿನ ಮೇಲೆ ರಾವಣನ ಪಾಪಕೃತ್ಯ, ಶಬರಿಯ ರಾಮಭಕ್ತಿಯ ಅದ್ವಿತೀಯತೆ ಅದ್ಭುತವಾಗಿ ಮೂಡಿಬಂದಿವೆ.
ಬಯಕೆಯೇನಿದೆ ರಾಮ ಕೇಳಲು
ಭಯವ ತೋರದೆ ಶಬರಿಯೆಂದಳು
ನಯನವೆನ್ನಯ ನೋಡಬೇಕಿದೆ ಗುರುಗಳನು ಮತ್ತೆ|
ಪಯಣವೆನ್ನಯ ಸಾಗಬೇಕಿದೆ
ದಯೆಯ ತೋರಿಸಿ ಹೋಗಲಿರುವನು
ಜಯದ ಮಾರ್ಗವು ಬರಲಿ ನನ್ನೆಡೆಗೆಂದು ಹೇಳಿದಳು||
ರಾಮನಿಗಾಗಿ ಕಾದಿದ್ದ ವಯಸ್ಸಾದ ಶಬರಿ ರಾಮನ ಕಂಡೊಡನೆ ಅವಳಲ್ಲಿ ಉಲ್ಲಾಸ ಉತ್ಸಾಹ ಸಂಭ್ರಮ ಸಡಗರ ಮನೆಮಾಡಿದೆ.ರಾಮ ನಿನ್ನ ಬಯಕೆ ಏನು ಎಂದು ಕೇಳಿದಾಗ ಯಾವುದೆ ಅಂಜಿಕೆಯಿಲ್ಲದೆ ಇನ್ನೊಮ್ಮೆ ನಿಮ್ಮನ್ನು ಹೀಗೆ ಸದಾ ನೋಡಬೇಕಿನಿಸುತಿದ್ದೆ. ಎಂದು ತಾನು ಆಯ್ದು ತಂದ ಹಣ್ಣುಗಳನ್ನು ತಿನ್ನಿಸಿದರು.ಇಲ್ಲಿ ಶಬರಿಯ ಮುಗ್ಧತೆ, ಆಪ್ತತೆ, ಆತ್ಮೀಯತೆ, ಸ್ನೇಹ, ಪ್ರೀತಿ ,ಕಾಳಜಿ,ಭಕ್ತಿಯನ್ನು ಬಿಂಬಿಸಿರುವರು.
ಕಿಷ್ಕಿಂದಾ ಕಾಂಡ……
ಇಲ್ಲಿ ವಾಲಿ ಸುಗ್ರೀವರ ಸಹೋದರತ್ವ ಅವರಿಬ್ಬರ ನಡುವಿನ ದ್ವೇಷ ,ವಾಲಿಯ ವಧೆ ಸುಗ್ರೀವನ ಪಟ್ಟಾಭಿಷೇಕ,ಹನುಮಂತನ ಪ್ರೀತಿ, ವಿಶ್ವಾಸ, ಸಹೋದರತೆ ,ಅನ್ಯೋನ್ಯತೆಗಳನ್ನು ನೋಡಬಹುದು. ಹಾಗೆಯೇ ಕಿಷ್ಕಿಂದಾ ರಾಜ್ಯದ ರಾಜ ವಾಲಿಯನ್ನು ರಾಮ ಕೊಂದ ಬಗ್ಗೆ ಮತ್ತು ಸೀತೆಯ ಹುಡುಕಾಟ ಹನುಮಂತನ ಚಾಣಾಕ್ಷತನ ಹಾಗು ರಾಮ ಮತ್ತು ಸುಗ್ರೀವರ ನಡುವೆ ಮೈತ್ರಿಯ ಬಗ್ಗೆ ವಿವರಣೆ ಚಂದವಾಗಿ ಮೂಡಿದೆ ಸೀತೆಯನ್ನು ಹುಡುಕಲು ಸುಗ್ರೀವನು ತನ್ನ ಸೈನ್ಯದೊಂದಿಗೆ ಸಿದ್ಧತೆ ಮಾಡಿಕೊಂಡ ಪರಿಯನ್ನು ಕವಯತ್ರಿಯವರು ಅಮೋಘವಾಗಿ ಚಿತ್ರಿಸಿರುವುದನ್ನು ಈ ಭಾಗದಲ್ಲಿ ಸಂಪೂರ್ಣವಾಗಿ ಕಾಣಬಹುದು.
ಆಣೆಯನು ಸುಗ್ರೀವ ಮಾಡುತ
ನಾನು ನೀಡುವೆ ನಿನಗೆ ನೆರವನು
ಜಾನಕಿಯು ಸಿಗುವಂತೆ ಮಾಡುವೆ ಶೀಘ್ರವೆಂದಿರುವ
ಸೇನೆಯೊಂದಿಗೆ ಸಾಗಿರಾವಣ
ನೇನು ಮಾಡುವ ನೋಡಿ ಬಿಡುವೆನು
ನೀನು ನಿಶ್ಚಿಂತೆಯಲಿ ಮುಂದಿನ ಕಾರ್ಯ ನೋಡೆಂದ
ರಾಮ ಹಾಗೂ ಹನುಮಂತನ ಸ್ನೇಹ ಎಷ್ಟು ಮುಖ್ಯವೊ ಹಾಗೂ ಪವಿತ್ರವೋ ಹಾಗೆಯೇ ರಾಮ ಹಾಗೂ ಸುಗ್ರೀವನ ಸ್ನೇಹ ಕೂಡ ಈ ಕಿಷ್ಕಿಂದಾ ಕಾಂಡದಲ್ಲಿ ಬಹಳ ಪ್ರಾಮುಖ್ಯತೆಯನ್ನ ಹೊಂದಿದೆ. ರಾಮನಿಗೆ ಸೀತೆಯನ್ನ ಹುಡುಕುವಲ್ಲಿ ಸುಗ್ರೀವ ಹಾಗೂ ವಾನರ ಸೇನೆಯ ಸಹಾಯ ಅಪಾರ. ರಾಮ ಹೇಗೆ ಸುಗ್ರೀವನಿಗೆ ಸಹಾಯ ಮಾಡಿದನೋ ಹಾಗೆಯೇ, ಸುಗ್ರೀವ ಸಹ ರಾಮನಿಗೆ ಸೀತೆಯನ್ನ ಹುಡುಕುಲು ಸಹಾಯ ಮಾಡಿದ ಸಂಪೂರ್ಣ ಮಾಹಿತಿ ನೀಡಿರುವರು. ಸುಗ್ರೀವ ತನ್ನ ವಾನರ ಸೇನೆಯನ್ನ ರಾಮನಿಗೆ ಒಪ್ಪಿಸುತ್ತಾನೆ. ರಾಮ ಕೂಡ ಇದೇ ವಾನರ ಸೇನೆ ಹಾಗೂ ಹನುಮಂತನ ಸಹಾಯದಿಂದ ಸೀತೆಯನ್ನು ರಾವಣನಿಂದ ಬಿಡಿಸಿ ತರಲು ಉಪಯೋಗಿಸಿಕೊಂಡ ರೀತಿಯನ್ನು ತುಂಬಾ ಚನ್ನಾಗಿ ವಿವರಿಸಿರುವರು.
ಸುಂದರಕಾಂಡ…..
ಬೃಹದ್ಗ್ರಂಥವಾದ ಈ ರಾಮಾಯಣದಲ್ಲಿ ಅತ್ಯದ್ಭುತವಾಗಿ,ನಯನಮನೋಹರವಾಗಿ, ತುಂಬಾ ಸುಂದರವಾಗಿ ಚಿತ್ರಿತಗೊಂಡಿರುವ
ಕಾಂಡವಾಗಿರುವುದರಿಂದ ಈ ಭಾಗಕ್ಕೆ ಸುಂದರ ಕಾಂಡವೆನ್ನುವರು ಎಂಬುದನ್ನು ಕವಯತ್ರಿಯವರ ಬರೆಹಗಳಲ್ಲೆ ಕಂಡುಹಿಡಿಯಬಹುದಾಗಿದೆ. ಈ ಕಾಂಡದಲ್ಲಿನ ಒಂದೊಂದು ಕಾವ್ಯವು ಸೀತಾ, ಆಂಜನೇಯರ ಸಂಭಾಷಣೆ, ಆಂಜನೇಯ ಮತ್ತು ರಾಮನ ಸಂಭಾಷಣೆ, ಹನುಮನು ಸೀತೆಯನ್ನು ಹುಡುಕಿದ ರೀತಿ, ಲಂಕೆಯನ್ನು ಸುಟ್ಟ ಸಂದರ್ಭ ಸೇರಿದಂತೆ ಆಂಜನೇಯನಿಗೆ ಸಂಬಂಧಿಸಿದ ಎಲ್ಲಾ ಸನ್ನಿವೇಶಗಳನ್ನು ಇಲ್ಲಿ ಅತ್ಯಂತ ಸುಂದರವಾಗಿ ಶೋಭಾ ಕವಯತ್ರಿಯವರು ಚಿತ್ರಿಸಿದ್ದಾರೆ. ಅಷ್ಟೆ ಅಲ್ಲ ಈ ಒಂದು ಕಾಂಡದಲ್ಲಿ ಆತ್ಮೀಯತೆ, ಸ್ನೇಹತ್ವ, ಮಾತೆಯ ಬಂಧುರ ಬಾಂಧವ್ಯದ ಮಧುರ ಕ್ಷಣಗಳು, ಕಾತರ, ಹಾತುರ ,ನೋವ ಅಲೆಗಳು, ಒಲವಿನ ಉಡುಗೊರೆ ,ನೆನೆಪಿನ ಕಾಣಿಕೆಗಳು, ಗುರುತಿನ ವಸ್ತುಗಳ ಬಗ್ಗೆ ಅಭೂತಪೂರ್ಣ ಘಟನೆಗಳನ್ನು ಈ ಭಾಗದಲ್ಲಿ ಚಿತ್ರಿಸಿರುವುದು ಮತ್ತೊಮ್ಮೆ ಮಗದೊಮ್ಮೆ ಓದಬೇಕೆನಿಸುತ್ತದೆ. ಹಾಗೆಯೆ ಹನುಮನ ಇನ್ನೊಂದು ಹೆಸರೆ ಸುಂದರ.ಇವನ ಮಾತೃಭಕ್ತಿ ,ದೈವ ಭಕ್ತಿ, ಸ್ವಾಮಿನಿಷ್ಟೆ ನಂಬಿಕೆಯಾಧಾರಿತ ಗುಣಗಳೆಲ್ಲವೂ ಈ ಭಾಗದಲ್ಲೆ ಎತ್ತಿ ಹಿಡಿದಿರುವುದು ಈ ಕಾಂಡ ಅತ್ಯಂತ ಸುಂದರವಾಗಿಯೆ ಮೂಡಿಬಂದಿದೆ ಎಂದರೆ ತಪ್ಪಾಗಲಾರದು.
ಉರಿದು ಹೋದವದೆಷ್ಟು ಸದನವು
ಗರಗರನೆ ಸುತ್ತುತ್ತ ಬಾಲವ
ಪುರದಲಾತನು ಹಾರ ತೊಡಗಲು ಸಿಕ್ಕಿಯೆದುರಲ್ಲಿ
ಕರೆಗೆ ಕರಗುತ ಸೀತೆಯಮ್ಮನ
ನೆರವು ನೀಡಿರಲಗ್ನಿ ದೇವನು
ಬರದು ಕಷ್ಟವು ಆಂಜನೇಯಗೆ ಬೆಂಕಿ ತಾಗಿಲ್ಲ|
ಹನುಮ ತನ್ನ ಉರಿಯುತ್ತಿರುವ ಬಾಲದಿಂದ ಹೊರ ಬಂದು ಲಂಕಾ ನಗರಕ್ಕೆ ಬೆಂಕಿ ಹಚ್ಚಲು ಮನಸ್ಸು ಮಾಡುವ ಬಗ್ಗೆ, ಹನುಮ ವಿಭೀಷಣನ ನಿವಾಸವನ್ನು ಹೊರತುಪಡಿಸಿ ಇಡೀ ನಗರವನ್ನು ಸುಡುವ ಪರಿ , ಎಲ್ಲಾ ರಾಕ್ಷಸರು ಉರಿಯುತ್ತಿರುವ ಬೆಂಕಿಯನ್ನು ನೋಡಿ ಭಯಭೀತರಾದುದ್ದು, ಅವರ ನಗರವನ್ನು ಅದರ ಮರಗಳು, ಮನೆಗಳು ಮತ್ತು ಜೀವಿಗಳ ಸಮೂಹವನ್ನು ದಹಿಸಿದ್ದು, ಹನುಮನು ತನ್ನ ಸುಡುವ ಬಾಲದಿಂದ , ಲಂಕೆಯ ಮನೆ-ಮನೆಗಳಲ್ಲಿ ಮಿಂಚಿನ ಮೋಡದಂತೆ ಅಡ್ಡಾಡಿದನು.ಅದಲ್ಲದೆ ಉದ್ಯಾನವನಗಳು,ಮಹೋನ್ನತ ಅರಮನೆಗಳನ್ನು ಹನುಮನು ಭಯವಿಲ್ಲದೆ ಸುಡುವ ಹನುಮನ ಕೋಪತಾಪಗಳು ಭೀಕರವಾದ ಚಿತ್ರಣ ಹಾಗೆಯೇ ಹನುಮನು ಮಹಾ ವೇಗದಿಂದ, ಗಾಳಿಗೆ ಸಮಾನವಾದ ಶಕ್ತಿಯನ್ನು ಹೊಂದಿರುವ ಬಗೆಗಿನ ಮಾಹಿತಿ ತುಂಬಾ ಚನ್ನಾಗಿ ಮೂಡಿಬಂದಿದೆ.
ಯುದ್ಧಕಾಂಡ……
ಯುದ್ಧಕಾಂಡಕ್ಕೆ ಕಾರಣವಾದ ಅಂಶಗಳನ್ನು ಕವಯತ್ರಿ ತುಂಬಾ ಚಂದವಾಗಿ ಭಾಮಿನಿ ಷಟ್ಪದಿಯೊಳಗೆ ನೀಡಿರುವುದು ನಿಜಕ್ಕೂ ಖುಷಿಯೆನಿಸುತ್ತದೆ. ಸೀತೆಯನ್ನು ಹುಡುಕಲು ಹೋದ ಆಂಜನೇಯ ಇನ್ನಿತರ ವಾನರ ವೀರರು ಲಂಕೆಯನ್ನು ಸುಟ್ಟು ಸೀತೆಯನ್ನು ಭೇಟಿಮಾಡಿ ಅವಳಿಂದ ಚೂಡಾಮಣಿಯನ್ನು ಪಡೆದು ಕಿಷ್ಕಿಂಧೆಗೆ ಬಂದು ಅಶೋಕ ವನದಲ್ಲಿ ಸೀತಾದೇವಿಯನ್ನು ನೋಡಿದ್ದು, ಮಾತನಾಡಿಸಿದ್ದು ಮತ್ತು ತನ್ನನ್ನು ಅಯೋಧ್ಯೆಗೆ ಕರೆದೊಯ್ಯಬೇಕೆಂಬ ಸೀತಾಮಾತೆಯ ಮನದ ಆಶಯವನ್ನು ಹನುಮಂತ ತಿಳಿಸುವ ಮಾತುಗಳ ಪದ ಲಾಲಿತ್ಯ ಹಾಗೆಯೆ ಲಂಕೆಯಲ್ಲಿ ರಾಮ ರಾವಣರ ನಡುವೆ ನಡೆದ ಘನಘೋರ ಯುದ್ಧ, ಸಂಜೀವಿನಿ ತಂದು ಸಾಹಸ ಮೆರೆದ ಹನುಮಂತನ ಕಾರ್ಯಗಳನ್ನು ನೋಡಬಹುದಾಗಿದೆ.
ಮೂರು ಲೋಕವ ಗೆದ್ದ ರಾವಣ
ತೋರಲಾಗದೆ ತನ್ನ ಶಕ್ತಿಯ
ವೀರ ರಾಮನ ಮುಂದೆ ಸೋತನು
ಕೆಟ್ಟದನು ಮಾಡಿ
ಕೋರಿದನು ಕೊಡುತಿದ್ದನಣ್ಣನು
ಯಾರ ದೃಷ್ಟಿಯು ತಗುಲಿತವನಿಗೆ
ಮೇರೆ ಮೀರಿದ ನಡತೆ ಕೊನೆಯಲಿ ಕಳ್ಳನೆನಿಸಿರುವ||
ರಾಮ ಮತ್ತು ರಾವಣನ ನಡುವೆ ಭೀಕರ ಯುದ್ಧ ಪ್ರಾರಂಭವಾಗಿ ಕೊನೆಗೊಳ್ಳುವವರೆಗಿನ ಈ ಯುದ್ಧಕಾಂಡದ ವಿಶ್ಲೇಷಣೆಯಂತು ಓದುತ್ತಿದ್ದರೆ ನಿಜ ಈ ರಾಮಚರಿತೆಯೊಳಗೆ ಮುಳುಗಿ ಹೋಗಿದ್ದೆ ಅಷ್ಟು ಆಸಕ್ತಿದಾಯಕವಾದ ಅಂಶಗಳನ್ನು ನಾ ಅರಿತೆ. ರಾವಣನ ಸಂಹಾರಕ್ಕೆ ಪರಿಹಾರ ಕಾಣದೆ ರಾಮನು ಚಿಂತಾಕ್ರಾಂತನಾದ. ಅಷ್ಟರಲ್ಲಿ ರಾವಣನ ಕಿರಿಯ ಸಹೋದರ ವಿಭೀಷಣನು ಬಂದು ಶ್ರೀರಾಮನಿಗೆ ರಾವಣನ ಹೇಗೆ ಸೋಲಿಸಬಹುದು ಎಂಬ ರಹಸ್ಯವನ್ನು ತಿಳಿಸಿದೊಡನೆ ರಾವಣನನ್ನು ಸಂಹರಿಸಿ ವಿಜಯಿಶಾಲಿಯಾದನ್ನು ನೋಡಬಹುದಾಗಿದೆ.ಮೂರು ಲೋಕ ಗೆದ್ದವನಿಗೆ ರಾಮನೊಂದಿಗೆ ಜಯ ಸಾಧಿಸಲಾರದ್ದಾಗಿದ್ದು ವಿಪರ್ಯಾಸವೆ ಸರಿ.!
ಉತ್ತರಕಾಂಡ…….
ಈ ಭಾಗದಲ್ಲಿ ಸೀತೆಯ ಪರಿತ್ಯಾಗವನ್ನು , ಹಾಗೆಯೆ ಸೀತಾ ರಾಮರ ವಿಯೋಗದಿಂದಾಗಿ ಅಗ್ನಿಗಾಹುತಿಯಾಗುವುದರ ಮುಖೇನ ಭೂತಾಯಿ ಮಡಿಲ ಸೇರಿದ ಬಗ್ಗೆ ಚನ್ನಾಗಿ ವರ್ಣಿಸಲಾಗಿದೆ.
ಸೊಗವದೆಲ್ಲೆಡೆ ವೃದ್ಧಿಗೊಂಡಿದೆ
ಮಗನು ಸದನಕೆ ಬಂದನೆನ್ನುವ
ನಗುವು ಹಿರಿಯರ ಮೊಗದಲೆದ್ದಿಹ ದೃಶ್ಯ ಬಲುಚೆಂದ
ಖಗವು ಮೃಗಗಳು ಲಾಸ್ಯವಾಡಿವೆ
ಭಗನು ಹರಸುತಲಿರುವ ನಭದಲಿ
ಮಗಳು ಜಾನಕಿ ಮತ್ತೆ ತಮ್ಮೊಡೆ ಅತ್ತೆಯರ ಖುಷಿಯು||
ಹದಿನಾಲ್ಕು ವರ್ಷ ವನವಾಸ ಮುಗಿಸಿ ಬಂದಂತಹ ರಾಮ, ಲಕ್ಷ್ಮಣ ,ಸೀತೆಯರನ್ನು ಕಂಡು ಅಯೋಧ್ಯೆಯ ಮಂದಿ ಅತ್ಯಂತ ಸಂತಸದಿಂದ ಸ್ವಾಗತಿಸಿದ ಪರಿ ಹಾಗು ಪ್ರಕೃತಿಯ ಹರ್ಷ ಸಿಂಚನ ಸಂಭ್ರಮಾಚರಣೆಯಲ್ಲಿ ತೊಡಗಿರುವುದು, ಅಲ್ಲಿನ ಖಗ ಮೃಗಗಳ ಖುಷಿ ಹೇಳತೀರದು. ಮಗಳು ಜಾನಕಿ ಎಲ್ಲರೊಡನೆ ಸಂತಸದಲ್ಲಿ ಇರುವಂತಾಯ್ತು ಎಂಬ ಹರ್ಷದ ಭಾವವನ್ನು ಈ ಪದ್ಯದಲ್ಲಿ ಉತ್ತಮ ಪದಪುಂಜಗಳ ಹೊದಿಕೆಯೊಂದಿಗೆ ವರ್ಣಿಸಿರುವ ಪರಿ ತುಂಬಾ ಚನ್ನಾಗಿದೆ.
ಈ ರಾಮಾಯಣದ ಕಥೆಯನ್ನು ಕವಯತ್ರಿ ಶೋಭಾ ಹರಿಪ್ರಸಾದರವರು ತಮ್ಮದೆ ಆದ ವಿಶೇಷ ಶೈಲಿಯಲ್ಲಿ ರಚಿಸಿರುವುದನ್ನು ನೋಡಿ ಓದಿ ತನ್ಮಯಳಾಗಿದ್ದಂತು ಸತ್ಯ. ಇಲ್ಲಿ ರಚನೆಯಾಗಿರುವ ಪ್ರತಿಯೊಂದು ಕಥೆಗಳು ಕೂಡ ಆಳವಾಗಿದ್ದು, ಉತ್ತಮ ಶ್ರೀಮಂತಿಕೆಯನ್ನು ಒಳಗೊಂಡಿರುವುದನ್ನು ಕಂಡ ಮನ ಹರ್ಷಗೊಂಡಿದೆ. ಹಾಗೆಯೇ ಕವಯತ್ರಿಯವರ ಈ ಮಹಾಕಾವ್ಯದಲ್ಲಿ ಬರುವ ಪ್ರಮುಖ ಪಾತ್ರಧಾರಿಯವರ ಆದರ್ಶ ಬದುಕು,ಸತ್ಯ, ನ್ಯಾಯ ಪರತೆ, ಕಷ್ಟಸಹಿಷ್ಣುತೆಗಳ ಬಗ್ಗೆ ಬರೆದಿರುವ ವಿಸ್ತೃತ ವರದಿ ತುಂಬಾ ಚನ್ನಾಗಿ ಮೂಡಿ ಬಂದಿರುವುದನ್ನು ಗಮನಿಸಬಹುದು. ಹಾಗೆಯೇ ಸೀತೆ ,ಊರ್ಮಿಳೆಯರ ಆದರ್ಶ ಬದುಕು, ಒಬ್ಬ ರಾಜನು ತನ್ನ ರಾಜ್ಯವನ್ನು ಹೇಗೆ ಆಳಬೇಕು?. ಒಬ್ಬ ಮನುಷ್ಯನು ಈ ಜಗತ್ತಿನಲ್ಲಿ ತನ್ನ ಜೀವನವನ್ನು ಹೇಗೆ ನಡೆಸಬೇಕು?. ಆದರ್ಶ ಪುರುಷ ಅಂದರೆ ಹೇಗಿರಬೇಕು.? ಅವನು ಹೇಗೆ ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು.? ಎಂಬುದನ್ನು ಅತ್ಯಂತ ಸ್ಫುಟವಾಗಿ ಈ ಚರಿತೆಯಲ್ಲಿ ವರ್ಣಿಸಿರುವರು.
ಹೀಗೆ ಕವಯತ್ರಿ ತಮ್ಮ ಶೋಭಾ ರಾಮಾಯಣವನ್ನು ಒಟ್ಟು ೩೯೯೧ ಭಾಮಿನಿ ಷಟ್ಪದಿಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಬರೆದಿರುವರು.ಈ ರಾಮಚರಿತೆಯ ಸಂಪೂರ್ಣ ಕಥೆ ಅರಿಯಬೇಕಾದರೆ ಈ ಮಹಾಕೃತಿಯನ್ನು ಖಂಡಿತ ಓದಲೇ ಬೇಕು.ಎಲ್ಲರೂ ಕೊಂಡು ಓದಿ ಹಾರೈಸಿ. ಮೇಡಮ್ ನಿಮ್ಮ ಮತ್ತಷ್ಟು ಮಗದಷ್ಟು ಮಹಾಕೃತಿಗಳು ಕನ್ನಡಾಂಬೆಯ ಸಾಹಿತ್ಯದ ಒಡಲನ್ನು ಸೇರಲಿ ಎಂದು ಆತ್ಮೀಯವಾಗಿ ಹಾರೈಸುವೆ..ಶುಭವಾಗಲಿ ಮೇಡಮ್.
ಲೇಖಕಿ : ಶೋಭಾ ಹರಿಪ್ರಸಾದ ಉಡುಪಿ
ಪುಸ್ತಕ ಪ್ರಕಟವಾದ ದಿನ : ಜನವರಿ 22 , 2024
ಧನ್ಯವಾದಗಳೊಂದಿಗೆ..
ಅಭಿಜ್ಞಾ ಪಿ.ಎಮ್.ಗೌಡ , ಮಂಡ್ಯ
