ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನ, ಕಾಪು

Share with your family and friends

Loading

ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಉಡುಪಿ ಜಿಲ್ಲೆಯ ಪದ್ಮಶಾಲಿ ಸಮಾಜದವರು ಪೂಜಿಸಿಕೊಂಡು ಬಂದಿರುವ ಹದಿನಾರು ದೇವಸ್ಥಾನಗಳಲ್ಲಿ ಕಾಪುವಿನ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನ ಒಂದಾಗಿದೆ. ಈ ದೇವಸ್ಥಾನಕ್ಕೆ ಸುಮಾರು 1200 ವರ್ಷಗಳ ಇತಿಹಾಸವಿರುವುದಾಗಿ ತಿಳಿದು ಬಂದಿದ್ದು, ಆಗಿನ ವಿಜಯನಗರ ಸಾಮ್ರಾಜ್ಯದ ರಾಜರ ಆಳ್ವಿಕೆಯ ಸಮಯದಲ್ಲಿ ನಿರ್ಮಿಸಲಾಗಿದೆಯೆಂದೂ, ಕಾಪು ಕ್ಷೇತ್ರದಲ್ಲಿ ಶ್ರೀ ವೀರಭದ್ರ ದೇವಸ್ಥಾನ ಪ್ರಪ್ರಥಮವಾಗಿ ಸ್ಥಾಪಿತಗೊಂಡಿರುವ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿರುತ್ತದೆ. ಅನಂತರ ಈ ದೇವಸ್ಥಾನವು ಜೈನರ ಆಳ್ವಿಕೆಯಲ್ಲಿದ್ದು, ಕಾಪು ಮಹತೋಭಾರ ಶ್ರೀ ಜನಾರ್ದನ ದೇವರ ದೇಗುಲ ನಿರ್ಮಾಣ ಸಮಯದಲ್ಲಿ ಜೈನರು ಪದ್ಮಶಾಲಿ ಸಮಾಜಕ್ಕೆ ಬಿಟ್ಟುಕೊಟ್ಟಿರುವುದಾಗಿ ತಿಳಿದು ಬಂದಿದೆ.

ಈ ಸಮಯದಲ್ಲಿ ದೇವಸ್ಥಾನವು ಹುಲ್ಲಿನ ಮಾಡಿನಿಂದ ರಚಿಸಲ್ಪಟ್ಟಿರುವುದಾಗಿ ಸಮಾಜದ ಹಿರಿಯರಿಂದ ತಿಳಿದು ಬಂದಿದೆ. ದೇವಸ್ಥಾನದ ಅಂಗಣಕ್ಕೆ ಯಾವುದೇ ಹಾಸುಕಲ್ಲು ಚಪ್ಪಡಿಕಲ್ಲು ಹಾಕಿರಲಿಲ್ಲ. ಉತ್ಸವ ಪೂಜಾದಿ ಸಮಯಗಳಲ್ಲಿ ಸಮಾಜದ ಹಿರಿಯ, ಕಿರಿಯರೆಲ್ಲರೂ ಸೇರಿ ಶ್ರಮದಾನದ ಮೂಲಕ ಹುಲ್ಲುಗಳನ್ನು ತೆಗೆದು ಸ್ವಚ್ಛಗೊಳಿಸಬೇಕಾದ ಪರಿಸ್ಥಿತಿ ಇತ್ತು. ಕ್ರಮೇಣ ಶ್ರೀ ದೇವರ ಅನುಗ್ರಹದಂತೆ ಮತ್ತು ಹಿರಿಯರ, ಊರ, ಪರವೂರ ದಾನಿಗಳ ಸಹಾಯದಿಂದ ದೇವಸ್ಥಾನದ ಗರ್ಭಗುಡಿ ಹಾಗೂ ತೀರ್ಥ ಮಂಟಪ ಶಿಲಾಮಯಗೊಳಿಸಲಾಯಿತು. ಹಾಗೆಯೇ ಅಂಗಣಕ್ಕೆ ಹಾಸುಗಲ್ಲನ್ನು ಹಾಕಲಾಯಿತು. ಗರ್ಭಗುಡಿಯ ಒಳಗೆ ದೇವರ ಬಲ ಹಾಗೂ ಎಡ ಬದಿಗಳಲ್ಲಿ ಶ್ರೀ ಗಣಪತಿ ಮತ್ತು ಶ್ರೀ ದುರ್ಗಾದೇವಿಯ ಆಲಯವನ್ನು ನಿರ್ಮಿಸಲಾಯಿತು. ಈ ಎಲ್ಲ ಜೀರ್ಣೋದ್ಧಾರ ಕಾರ್ಯ ಮುಗಿಸಿ 2000ನೇ ಇಸವಿಯ ಏಪ್ರಿಲ್ ತಿಂಗಳಲ್ಲಿ ಅಷ್ಟಬಂಧ ಬ್ರಹ್ಮಕಲಶ ಪೂಜಾವಿಧಿ ಕಾರ್ಯಗಳನ್ನು ನೆರವೇರಿಸಲಾಯಿತು. ಕ್ರಮೇಣ ದೇವಸ್ಥಾನಕ್ಕೆ ಸಭಾಮಂಟಪದ ಅವಶ್ಯಕತೆಯನ್ನು ಮನಗಂಡು ದೇವಸ್ಥಾನದ ದಕ್ಷಿಣ ಭಾಗದಲ್ಲಿ ಸುಮಾರು 500 ಮಂದಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ಆಸನದ ವ್ಯವಸ್ತೆ ಇರುವ ಸಭಾಭವನ ನಿರ್ಮಿಸಲಾಯಿತು.

ಈ ಸಭಾಮಂಟಪದಲ್ಲಿ ಮದುವೆ, ಉಪನಯನ, ಮುಂತಾದ ಮಂಗಳಕಾರ್ಯ, ರಕ್ತದಾನ ಶಿಬಿರ ಮತ್ತು ಇನ್ನಿತರ ಸಭೆ ಸಮಾರಂಭಗಳು ಜರುಗುತ್ತಿರುವುದು ಸಂತಸದ ವಿಷಯವಾಗಿದೆ. ಹಾಗೆಯೇ ದೇವಸ್ಥಾನದ ಪಶ್ಚಿಮ ಭಾಗದಲ್ಲಿ ಊಟಕ್ಕೆ ಕುಳಿತುಕೊಳ್ಳಲು ಅನುವಾಗುವಂತೆ ತಗಡಿನ ಚಪ್ಪರವನ್ನು ನಿರ್ಮಿಸಲಾಗಿದೆ. ಮೂಲಭೂತ ಸೌಕರ್ಯಗಳಾದ ನಳ್ಳಿ ನೀರಿನ ವ್ಯವಸ್ಥೆ, ಶೌಚಾಲಯ, ಸ್ನಾನದ ಮನೆ ಇತ್ಯಾದಿ ನಿರ್ಮಿಸಲಾಯಿತು. ವಧೂವರರಿಗೆ ಪ್ರತ್ಯೇಕಕೊಠಡಿ ವ್ಯವಸ್ಥೆ ನಿರ್ಮಿಸಲಾಯಿತು. ಗರ್ಭಗುಡಿಗೆ ತಾಗಿ ತೀರ್ಥಮಂಟಪವನ್ನು ಸುತ್ತುವರಿದು ಅಂಗಣಕ್ಕೆ ತಗಡಿನ ಚಪ್ಪರವನ್ನು ನಿರ್ಮಿಸಿ ಮಳೆಗಾಲದಲ್ಲಿ ಕೂಡ ಪೂಜಾ ಸಮಯದಲ್ಲಿ ಭಕ್ತರು ದೇವರ ದರ್ಶನವನ್ನು ಪಡೆಯುವ ವ್ಯವಸ್ಥೆಯನ್ನು ಮಾಡಲಾಯಿತು. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಶ್ರೀ ಗಣಪತಿ ಮತ್ತು ಶ್ರೀ ದುರ್ಗಾದೇವಿಯ ಆಲಯವನ್ನು ಗರ್ಭಗುಡಿಯಿಂದ ಪ್ರತ್ಯೇಕಿಸಿ ಪೌಳಿಯ ನೈರುತ್ಯ ಹಾಗೂ ವಾಯುವ್ಯ ಭಾಗದಲ್ಲಿ ನಿರ್ಮಿಸುವಂತೆ ಬಂದ ಸೂಚನೆ ಮೇರೆಗೆ ನಮ್ಮ ಕೂಡುಕಟ್ಟಿಗೆ ಸೇರಿದ ಶ್ರೀ ದಿನೇಶ್ ಕೆ. ಶೆಟ್ಟಿಗಾರ್ ಮುಂಬಯಿ (ಪಾಂಗಾಳ) ಇವರು ತಮ್ಮ ಸ್ವಂತ ಖರ್ಚಿನಲ್ಲಿ ಈ ಎರಡು ಗುಡಿಗಳನ್ನು ನಿರ್ಮಿಸಿ ನಮ್ಮ ಸಮಾಜಕ್ಕೆ ಒದಗಿಸಿದರು. ಗರ್ಭಗುಡಿಯ ಹೊಸ್ತಿಲಿಗೆ ಪೆರಿಯಕಲ್ಲು (ಮಹಾಬಲಿ ಪೀಠ) ನಿರ್ಮಿಸಲಾಗಿದೆ. ಇದರ ಜೊತೆಗೆ ದೇವಸ್ಥಾನದ ಗೋಪುರಕ್ಕೆ ಹೊಂದಿಕೊಂಡು ನೂತನ ಮುಖ ಮಂಟಪವನ್ನು ದಾನಿಗಳ ಸಹಕಾರದಿಂದ ನಿರ್ಮಿಸಲಾಗಿದೆ.

ಹಾಗೆಯೇ ಅಭಿವೃದ್ಧಿ ಕಾರ್ಯವನ್ನು ಮುಂದುವರಿಸುತ್ತಾ ಭೋಜನ ಶಾÀಲೆ ನಿರ್ಮಿಸುವ ಯೋಜನೆಗೆ ಕೈಹಾಕಿದ್ದು, ಸ್ವಸಮಾಜದ, ಊರ ಮತ್ತು ಪರವೂರ ದಾನಿಗಳ ಮತ್ತು ಸಂಘ ಸಂಸ್ಥೆಗಳ ನೆರವಿನಿಂದ ಭೋಜನಶಾಲೆ ನಿರ್ಮಿಸಲಾಗಿದೆ. ಈ ಯೋಜನೆಗೆ ನಮ್ಮ ಪ್ರಯತ್ನದ ಜೊತೆಗೆ ನಮಗೆ ಸನ್ಮಾನ್ಯ ಧರ್ಮಸ್ಥಳದ ಧರ್ಮಾಧಿಕಾರಿಗಾಳಾದ ಶ್ರೀ ವೀರೇಂದ್ರ ಹೆಗ್ಗಡೆಯವರಿಂದ ರೂ.2,00,000 ಅನುದಾನ ಒದಗಿಬಂದಿದ್ದು ಹಾಗೂ ಆ ಸಮಯದಲ್ಲಿ ಶಾಸಕರಾಗಿದ್ದ ಸನ್ಮಾನ್ಯ ವಿನಯಕುಮಾರ್ ಸೊರಕೆಯವರು ಸರಕಾರದ ವತಿಯಿಂದ ರೂ.15,00,000 ಅನುದಾನವನ್ನು ಬಿಡುಗಡೆಗೊಳಿಸಲು ಸಹಕರಿಸಿದ್ದರು. ಈ ಅಭಿವೃದ್ಧಿಕಾರ್ಯ ಮುಂದುವರಿದು ದಿನಾಂಕ 07.05.2017 ರಿಂದ ದಿನಾಂಕ 10.05.2017 ರವರೆಗೆ ಗಣಪತಿ ಹಾಗೂ ಆದಿಶಕ್ತಿ ದೇವರ ನೂತನ ಶಿಲಾಮಯÀ ಗುಡಿಗಳ ಸಮರ್ಪಣಪೂರ್ವಕ ಆದಿಶಕ್ತಿ, ಗಣಪತಿ ಮತ್ತು ಶ್ರೀ ವೀರಭದ್ರ ದೇವರ “ಪುನರ್‍ಪ್ರತಿμÉ್ಠ ಅಷ್ಟಬಂಧ ಬ್ರಹ್ಮಕುಂಭಾಭಿμÉೀಕ” ಹಾಗೂ ವಾರ್ಷಿಕ ಪೂಜಾ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು.

ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ವರ್ಷಂಪ್ರತಿ ಜರುಗುವ ಪೂಜಾ ಕಾರ್ಯಕ್ರಮಗಳಾದ ವಾರ್ಷಿಕ ಮಹೋತ್ಸವ (ಪಗ್ಗು ಹುಣ್ಣಿಮೆ), ನವರಾತ್ರಿ ಪೂಜೆ, ಚಂಡಿಕಾಹೋಮ, ಹೂವಿನ ಪೂಜೆ, ಚೌತಿಪೂಜೆ, ಋಗುಪಾಕರ್ಮ, ಸಂಕ್ರಮಣ ಪೂಜೆ, ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಎಲ್ಲ ಸದ್ಭಕ್ತರ ಸಹಕಾರದಿಂದ ನೆರವೇರಿಸಿಕೊಂಡು ಬರಲಾಗುತ್ತಿದೆ.