ಬಂದಿದೆ ಬಂದಿದೆ ಬಂದಿದೆ ನೋಡಿರಿ
ಶುಭವನು ಕೋರುವ ಸಂಕ್ರಾಂತಿ |
ಬಂದಿದೆ ಬಂದಿದೆ ಬಂದಿದೆ ನೋಡಿರಿ
ಅಭಯವ ನೀಡುವ ಸಂಕ್ರಾಂತಿ |
ತನ್ನ ಕಕ್ಷೆಯನ್ನು ಬದಲಿಸುವ ಬೆಳಕಿನೊಡೆಯ ನೇಸರನನ್ನು ಪೂಜಿಸುವ ದಿನ ‘ ಮಕರ ಸಂಕ್ರಾಂತಿ* . ಸೂರ್ಯನಿಗೆ ಚಲನೆಯಿಲ್ಲ. ನಾವು ವಾಸಿಸುವ ವಸುಧೆ ಸೂರ್ಯನನ್ನು ಸುತ್ತು ಬರುವುದರಿಂದ ನಮಗೆ ಸೂರ್ಯ ಚಲಿಸಿದಂತೆ ಕಾಣಿಸುವ. ಮಕರ ಸಂಕ್ರಾಂತಿ ವೃತ್ತದ ಮೇಲೆ ಸೂರ್ಯನ ನೇರ ಕಿರಣಗಳು ಬೀಳುವ ದಿನವಿದು. ಹಿಂದೂ ಸಂಸ್ಕೃತಿಯಂತೆ ದೇಶದೆಲ್ಲೆಡೆ ಈ ದಿನಕ್ಕೆ ವಿಶೇಷ ಮಹತ್ವವಿದೆ.
ಹಿಂದೂ ಧರ್ಮದ ಸೌರಮಾನ ಪಂಚಾಂಗದ ಹತ್ತನೇ ಮಾಸ ಮಕರ ಆರಂಭವಾಗುವ ಶುಭ ದಿನ . ದಕ್ಷಿಣಾಯಣ ಮುಗಿದು ಉತ್ತಾರಯಣದ ಆರಂಭ.
ರಾಶಿಯ ಬದಲಿಸಿ ತೋಷದಿ ಮಕರಕೆ
ನೇಸರ ಹೊಗ್ಗುವ ಸಂಕ್ರಾಂತಿ |
ಹಾಸವ ಬೀರುತ ಸಾಸಿರ ಬೆಳೆಗಳು
ಬೇಸರ ನೀಗುವ ಸಂಕ್ರಾಂತಿ |
ಉತ್ತರಾಯಣ ಎನ್ನುವುದು ಜನವರಿ ಹದಿನಾಲ್ಕರಿಂದ ಆರಂಭವಾಗಿ ಮುಂದಿನ ಆರು ತಿಂಗಳ ಕಾಲ ಇರುವ ಸಮಯ. ಈ ಆರು ತಿಂಗಳು ಸ್ವರ್ಗದ ಬಾಗಿಲು ತೆರೆದಿರುವುದೆಂಬ ವಿಶೇಷ ನಂಬಿಕೆ ನಮ್ಮಲ್ಲಿ. ಇದೊಂದು ಪುಣ್ಯ ಕಾಲ. ಮಹಾಭಾರತ ಯುದ್ಧ ಕಾಲದಲ್ಲಿ ಬಾಣಗಳ ಹಾಸಿಗೆ ಮೇಲಿದ್ದ ಶಂತನು – ಗಂಗೆಯ ಪುತ್ರ ಬೀಷ್ಮ ಪಿತಾಮಹರು ಉತ್ತರಾಯಣ ಆರಂಭವಾಗುವ ಈ ದಿನವನ್ನು ಕಾದಿದ್ದರಂತೆ ತನ್ನ ಕೊನೆಯುಸಿರೆಳೆಯಲು. ಅವರಿಗೆ ಇಚ್ಛಾಮರಣದ ವರವಿದ್ದುದ್ದು ಅವರ ಅಂತಿಮ ಇಚ್ಛೆ ಈಡೇರಿಸಿತ್ತು.
ಖಗ ಮೃಗ ನಲಿದಿವೆ ಭಗನಿಗೆ ವಂದಿಸಿ
ಸೊಗವನು ತಂದಿದೆ ಸಂಕ್ರಾಂತಿ |
ತೊಗಲನು ರಕ್ಷಿಸಿ ಮೊಗದಲಿ ಕಂಡಿಹ
ದುಗುಡವ ಕಳೆದಿದೆ ಸಂಕ್ರಾಂತಿ |
ಕಬ್ಬು ,ಗೆಣಸು ,ನೆಲಗಡಲೆ ,ಎಳ್ಳು , ಅವರೆ ,ಬಟಾಣಿ ,ಹುರುಳಿ ,ಹುರಿಗಡಲೆ ಇತ್ಯಾದಿ ಬೆಳೆಗಳು ಸಮೃದ್ಧವಾಗಿ ಬೆಳೆಯುವ ಕಾಲ ಇದು.
ಚಳಿಗಾಲದಲ್ಲಿ ಚರ್ಮ ಸುಕ್ಕುಗಟ್ಟುವುದು , ಒಣೆಯುವುದು ಸಾಮಾನ್ಯ , ದೇಹದ ತಾಪಮಾನ ಕಡಿಮೆ ಆಗುವುದು. ದೇಹವನ್ನು ಬಿಸಿಯಾಗಿಡಲು ,ಆರೋಗ್ಯ ಸಮಸ್ಯೆಗಳನ್ನು ತಡೆಯಲು ದಿವ್ಯೌಷಧಗಳು ಆ ಕಾಲದಲ್ಲಿ ಬೆಳೆಯಲ್ಪಡುವ ಆಹಾರ ಧಾನ್ಯಗಳು ,ಗಡ್ಡೆಗೆಣಸುಗಳು ,ಕಬ್ಬು ಮುಂತಾದವು.ಕೆಲವನ್ನು ಬೇಯಿಸಿ ,ಕೆಲವನ್ನು ಹಸಿಯಾಗಿ ತಿನ್ನುವರು. ಕಸ ಕಡ್ಡಿ ಧಾನ್ಯದ ಜೊಳ್ಳಿಗೆ ಕಿಚ್ಚು ಹಾಕುವ ಪದ್ಧತಿ ಇದೆ.
ಮನೆಯೆದುರು ಮಾತ್ರವೇ ಅಲ್ಲ ಕೆಲವೆಡೆ ಜನರು ತಾವು ವಾಸಿಸುವ ಬೀದಿಯುದ್ದಕ್ಕೂ ತಳಿರು – ತೋರಣ ಕಟ್ಟಿ ಶೃಂಗರಿಸುವ ,ರಂಗೋಲಿ ಬರೆಯುವ ಪದ್ಧತಿ ಇದೆ. ಎಳ್ಳು – ಬೆಲ್ಲ – ಕಬ್ಬು ,ಹುರಿಗಡಲೆ ಇತ್ಯಾದಿಗಳನ್ನು ಮನೆ ಮನೆಗೆ ಹೋಗಿ ಹಂಚಿ ” ಎಳ್ಳು ಬೆಲ್ಲ ತಿನ್ನಿ ಒಳ್ಳೊಳ್ಳೆ ಮಾತಾಡಿ ” ಎಂದು ಪರಸ್ಪರ ಶುಭಾಶಯ ಕೋರುವವರೂ ಇದ್ದಾರೆ.
ತಮಿಳುನಾಡಿನಲ್ಲಿ ಈ ಹಬ್ಬವನ್ನು “ಪೊಂಗಲ್” ಎಂದು ಕರೆಯುವರು. ಪೊಂಗಲ್ ಎನ್ನುವುದು ಹೆಸರು ಬೇಳೆ,ಬೆಲ್ಲ , ತೆಂಗಿನಕಾಯಿ , ಗೇರು ಬೀಜ- ಒಣ ದ್ರಾಕ್ಷಿ ಹಾಕಿ ತಯಾರಿಸುವ ಸಿಹಿ ಖಿಚಡಿ. ನಮ್ಮ ರಾಜ್ಯದ ಕರಾವಳಿಯಲ್ಲಿ ಮೊದಲಿಂದಲೂ ಸಿಹಿ ಖಿಚಡಿ ಮಾಡುವ ಸಂಪ್ರದಾಯವಿದೆ. ಗುಜರಾತ್ – ಮಹಾರಾಷ್ಟ್ರದಲ್ಲಿ ಮೊದಲಿಂದ ಈ ದಿನ ಗಾಳಿಪಟ ಹಾರಿಸುವ ಪದ್ಧತಿ ಇದೆ. ಈ ಪದ್ಧತಿ ಇಂದು ದೇಶದೆಲ್ಲೆಡೆ ಪಸರಿಸಿರುವುದು ವಿಶೇಷ..
‘ಲೋಹರಿ’ ಎಂದು ಪಂಜಾಬ – ಹರಿಯಾಣದಲ್ಲಿ ಕರೆಯಲ್ಪಡುವ ಈ ದಿನ ಕೇರಳದಲ್ಲಿ ಇನ್ನೂ ವಿಶೇಷ. ‘ ಮಕರ ವಿಳಕ್ಕು* ದರ್ಶನ ಅಯ್ಯಪ್ಪ ಸ್ವಾಮಿಯ ಭಕ್ತಾಧಿಗಳಿಗೆ. ಶ್ರದ್ಧೆಯಿಂದ – ಭಕ್ತಿಯಿಂದ ಹಲವು ದಿನಗಳ ವ್ರತಗಳನ್ನು ಹಿಡಿದು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವ ಭಕ್ತಾದಿಗಳು ಅಗಣಿತ. ವರ್ಷ ಪೂರ್ತಿ ಅಯ್ಯಪ್ಪನ ದರ್ಶನಕ್ಕೆ ಹೋಗುವವರಿದ್ದರೂ ಚಳಿಗಾಲದ ಮೂರ್ನಾಲ್ಕು ತಿಂಗಳು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳು ಹೆಚ್ಚು.
ಭಾಸುರರಂತಿಹ ರಾಸುಗಳೆಲ್ಲವ
ತೋಷದಿ ಪೂಜಿಪ ಸಂಕ್ರಾಂತಿ |
ರೋಷವ ತೊರೆದರೆ ಕಾಸಿನ ಸುರಿಮಳೆ
ಆಸರೆ ನೀಡುವ ಸಂಕ್ರಾಂತಿ |
ಕೃಷಿ ಕಾರ್ಯದಲ್ಲಿ ನಿರಂತರ ನೆರವು ನೀಡುವ ರಾಸುಗಳನ್ನು ಮರೆಯಲಾಗದು. ತೈಲ ಮಜ್ಜನ ಮಾಡಿಸಿ ,ಸಿಂಗರಿಸಿ ,ವಿಶೇಷ ಖಾದ್ಯಗಳನ್ನು ಬಡಿಸಿ ,ಆರತಿಯೆತ್ತಿ ಸಂಭ್ರಮಿಸುವರು.
ಕೆಲವೆಡೆ ಎತ್ತುಗಳ ಕಾಳಗ ,ಓಟದ ಸ್ಪರ್ಧೆಯಿದ್ದರೂ ಅವುಗಳು ಅನುಭವಿಸುವ ನೋವು ಕಣ್ಣಂಚಿನಲ್ಲಿ ನೀರು ತರಿಸುವುದು. ಅಂತಹ ಆಚರಣೆಗೆ ಕಡಿವಾಣ ಹಾಕುವುದು ಉತ್ತಮ. ನಮ್ಮ ಕಂಬಳ ಇದಕ್ಕಿಂತ ಭಿನ್ನ.. ಹಾಗಾಗಿ ಕಂಬಳದ ಬಗ್ಗೆ ಹೆಮ್ಮೆಯಿದೆ. ಉತ್ತರಾಯಣ ಆರಂಭ ಕಾಲದಲ್ಲಿ ರಾಸುಗಳಿಗೆ ಒಂದಿಷ್ಟು ವಿಶ್ರಾಂತಿ ಸಿಗುವುದು. ಇದು ಬಹಳ ಒಳ್ಳೆಯ ಚಿಂತನೆ. ಬೇಸಿಗೆ ಆರಂಭವಾಗುವ ಸಮಯ ರಾಸುಗಳಿಗೆ ವಿಶ್ರಾಂತಿ ಬೇಕೇ ಬೇಕು.
ಕರಾವಳಿಯುದ್ದಕ್ಕೂ ದೇಗುಲಗಳಲ್ಲಿ ವಿಶೇಷ ಪೂಜೆ ಈ ದಿನ ಇರುವುದು. ಕುಂದಾಪುರದ ಮಾರಣಕಟ್ಟೆಯಲ್ಲಿ ಮೂರು ದಿನಗಳ ಜಾತ್ರೆ. ಭಕ್ತ ಜನ ಸಾಗರವೇ ಹರಿದು ಬರುವುದು. ಬಾಳೆ ಹಣ್ಣಿನಗೊನೆ ,ಸಿಂಗಾರ ಹೂವು ,ಸೇವಂತಿ ಹೂ ಮಾಲೆ ದೇವರಿಗೆ ಅರ್ಪಿಸುವರು.
ಒಂದೊಂದು ಕಡೆಯಲ್ಲಿ ಒಂದೊಂದು ಬಗೆಯ ಖಾದ್ಯ. ಹೋಳಿಗೆ , ಚುಕ್ಕೆ ,ಲಡ್ಡು , ಗೆಣಸಿನ ತಿನಿಸು , ಓಡು ದೋಸೆ ( ಕಪ್ಪರ್ರೋಟಿ). ಓಡು ದೋಸೆ ಮಾಡಿ ಪಾಯಸಕ್ಕೆ ಹಾಕಿ ಸವಿಯುವರು.
ರಾಷ್ಟ್ರೀಯ ಧಾರ್ಮಿಕ ಹಬ್ಬವಿದು. ಈ ದಿನ ರಾಷ್ಟೀಯ ರಜಾ ದಿನವಾಗಿರುವುದು..ಯುಗಾದಿ, ಹೋಳಿ ,ದೀಪಾವಳಿ, ಗಣೇಶ ಚತುರ್ಥಿ, ನವರಾತ್ರಿಯಷ್ಟೇ ಮಹತ್ವ ಮಕರ ಸಂಕ್ರಾಂತಿಗಿದೆ.
ಹಿಂದೂ ಧರ್ಮದ ವಿಶೇಷ ಆಚರಣೆ. ನಮ್ಮೊಳಗೆ ಏಕತೆಯನ್ನು ಮೂಡಿಸಲಿ ಸಂಕ್ರಾಂತಿ. ಧಾರ್ಮಿಕ ಭಾವನೆಗಳನ್ನು ಇನ್ನಷ್ಟು ಬಲಗೊಳಿಸಲಿ ಮಕರ ಸಂಕ್ರಾಂತಿ.
(ನನ್ನ ” ಭಾಮಿ ಪುಟ್ಟಿ” ಎನ್ನುವ ಒಂದು ಸಾವಿರಕ್ಕೂ ಹೆಚ್ಚು ಭಾಮಿನಿ ಷಟ್ಪದಿಗಳಿರುವ ಕಥನ ಕಾವ್ಯದಲ್ಲಿ ‘ ಮಕರ ಸಂಕ್ರಾಂತಿ’ ಹಬ್ಬದ ಬಗ್ಗೆಯೂ ಬಂದಿರುವುದು )
( ಕಂಡಿರುವ ಕೇಳಿರುವ ಒಂದಷ್ಟು ವಿಚಾರಗಳು)
ಶೋಭಾ ಹರಿಪ್ರಸಾದ ಶೆಟ್ಟಿಗಾರ ಉಡುಪಿ