“ಅಜ್ಜಿಯರು ಉಡುವ ಸೀರೆ , ಮನೆಕೆಲಸದವರು ಉಡುವ ಸೀರೆ ಎಂದು ಈ ಹಿಂದೆ ಹೇಳ್ತಾ ಇದ್ರು. ಈಗ ಎಲ್ಲರೂ ಉಡ್ತಾರೆ…..ಕೈ ಮಗ್ಗದ ಸೀರೆ……..” – ನಿನ್ನೆ ಒಬ್ರು ಮಹಿಳೆ ಅವರ ಸಂದರ್ಶನದಲ್ಲಿ ಹೇಳಿದ್ದನ್ನು ಕೇಳಿಸಿಕೊಂಡೆ. ಹಾಗಿದ್ರೆ ಇದು ಸತ್ಯವೇ ? ನಾನು ತಿಳಿದ ಪ್ರಕಾರ ಸುಳ್ಳು
ನಮ್ಮಮ್ಮ ,ನಮ್ಮಜ್ಜಿ ,ಪಕ್ಕದ ಮನೆ ಗುಬ್ಬಕ್ಕ , ಗಿರಿಜಕ್ಕ ,ಹಿಂದಿನ ಮನೆ ಬಾಯಮ್ಮ ,ಶೆಟ್ರ ಮನೆ ಅಮ್ಮಣಿಯಮ್ಮ, ಮೇಲ್ಮನೆ ಅಮಿನಮ್ಮ ,ಗುಡ್ಡೆ ಮನೆ ಸಕ್ಕುವಕ್ಕ ಎಲ್ಲರೂ ಒಂದು ಕಾಲದಲ್ಲಿ ಉಡುತ್ತಿದ್ದ ಸೀರೆ. ನಮ್ಮ ಸಾಲಿಕೇರಿಗೆ ದೂಪದ ಕಟ್ಟೆ ಮೂಲಕ ಹೋದರೆ ಸಾಲಿಕೇರಿ ಮಾರ್ಗದಲ್ಲಿ ಮೊದಲು ಸಿಗುವ ಶೆಟ್ಟಿಗಾರರ ಮನೆ ನಮ್ಮದೇ .ನಮ್ಮ ಮನೆಯಲ್ಲಿ ನಾವು ಚಿಕ್ಕವರಿರುವಾಗ ಇದ್ದದ್ದು ಎಂಟು ಮಗ್ಗ. ಅಜ್ಜಯ್ಯ ಮತ್ತು ಅಪ್ಪಯ್ಯ ನೇಯುತಿದ್ದರು . ಅಮ್ಮ ನೂಲು ಸುತ್ತುತ್ತಿದ್ದರು . ಊರ ನಾಲ್ಕಾರು ಮಂದಿ ನಮ್ಮ ಮನೆಗೆ ಮಗ್ಗ ನೇಯಲು ,ನೂಲು ಸುತ್ತಲು ಬರುತ್ತಿದ್ದರಂತೆ. ನೋಡಿದ ನೆನಪಿಲ್ಲ. ನಾವಾಗ ಎಳೆಯರು. ನಮ್ಮ ಮನೆಯಿಂದ ಆರಂಭವಾಗಿ ಉಪ್ಪಿನ ಕೋಟೆಯ ತನಕ ಶೆಟ್ಟಿಗಾರರ ಮನೆ ಬಹಳ ಇದ್ದವು. ಬಿರ್ತಿಯಲ್ಲಿ ,ಹಾರಾಡಿ ,ಬ್ರಹ್ಮಾವರದಲ್ಲೂ ಕೈ ಮಗ್ಗದ ಕಾಯಕ ನಡೆಸುತ್ತಿದ್ದವರು ಬಹಳಷ್ಟು. ಹೆಚ್ಚು ಕಡಿಮೆ ಎಲ್ಲಾ ಶೆಟ್ಟಿಗಾರರ ಮನೆಯಲ್ಲಿ ಕನಿಷ್ಠ ಒಂದಾದರೂ ಕೈ ಮಗ್ಗವಿತ್ತು. ಊರಿನ – ಸುತ್ತಲಿನ ಮಹಿಳೆಯರು ಮಗ್ಗದ ಸೀರೆ ಉಡುತ್ತಿದ್ದರು. ನೇಯ್ದ ಹೆಚ್ಚಿನ ಬಟ್ಟೆ ಸಹಕಾರಿ ಸಂಘದ ಮೂಲಕ ಮಾರಾಟವಾಗುತ್ತಿದ್ದರೂ ಮನೆಗೆ ಭೇಟಿಯಿತ್ತು ಖರೀದಿಸುವವರೂ ಇದ್ದರು.
ಊರಿನ ಚೌಕಟ್ಟಿಂದ ಹೊರ ಬಂದು ನೋಡಿದಾಗ ನಮ್ಮ ಕರಾವಳಿಯ ಉದ್ದಕ್ಕೂ ಸಾಕಷ್ಟು ಮಂದಿ ಬಟ್ಟೆ ನೇಯುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಶೆಟ್ಟಿಗಾರರ ಇತಿಹಾಸ ಕೆದಕುತ್ತ ಹೋದಂತೆ ನೇಕಾರಿಕೆಯ ಬಗ್ಗೆ ಸಾಕಷ್ಟು ವಿವರ ತೆರೆದುಕೊಳ್ಳುವುದು. ಬೇರೆ ಬೇರೆ ಉಪ ಜಾತಿಗಳನ್ನು ಒಳಗೊಂಡ ಪದ್ಮಶಾಲಿಗಳ ಸಮೂಹ ಕಣ್ಣೆದುರು. ಎಲ್ಲರ ಮುಖ್ಯ ಕಾಯಕ ನೇಕಾರಿಕೆ ಮತ್ತು ಬಟ್ಟೆ ವ್ಯಾಪಾರ. ( ಈ ಬಗ್ಗೆ ಇನ್ನಷ್ಟು ವಿವರ ಮುಂದೆ ತೆರೆದುಕೊಳ್ಳುತ್ತ ಹೋಗುವುದು).
ಚರಿತೆಯ ಪುಟಗಳಲ್ಲಿ ಹಿಂದೆ ಸರಿದಾಗ 1905 ರ ಅಗಸ್ಟ್ 7 ರಂದು ಆರಂಭವಾದ ಸ್ವದೇಶೀ ಚಳುವಳಿ ನಮ್ಮೆದುರು. ಈ ಚಳುವಳಿಯಲ್ಲಿ ಕೈ ಮಗ್ಗ ನೇಕಾರರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸ್ವದೇಶಿ ಆಂದೋಲನದ ಗೌರವಾರ್ಥವಾಗಿ ‘ ಕೈ ಮಗ್ಗ ದಿನಾಚರಣೆ ” 2015 ರ ಅಗಸ್ಟ್ 7 ರಂದು ಪ್ರಪ್ರಥಮ ಬಾರಿಗೆ ಆರಂಭವಾದುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರ.
ಕೈ ಮಗ್ಗದ ಉದ್ಯಮ ನಮ್ಮ ಭಾರತೀಯ ಪರಂಪರೆಯ ಮುಖ್ಯ ಭಾಗ. ರಾಜ ಮಹಾರಾಜರ ಕಾಲದಿಂದಲೂ ಮನ್ನಣೆ ಪಡೆದ ಉದ್ಯಮ. ಹನ್ನೆರಡನೆಯ ಶತಮಾನದಲ್ಲಿ ಇದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ( ಜೇಡರ ದಾಸಿಮಯ್ಯ) ಅವರನ್ನು ಮರೆಯುವಂತಿಲ್ಲ. ನೇಕಾರ, ಸಂತ , ಆದ್ಯ ವಚನಕಾರ ದಾಸಿಮಯ್ಯ ತನ್ನ ಮಡದಿ ದುಗ್ಗಳೆಯ ಜೊತೆಗೂಡಿ ಮಗ್ಗದಲ್ಲಿ ಬಟ್ಟೆ ನೇಯುತ್ತಿದ್ದುದ್ದನ್ನು ಮರೆಯಲುಂಟೇ ? ದೇವರ ದಾಸಿಮಯ್ಯನವರ ಬಗ್ಗೆ ಅರಿಯಲೇ ಬೇಕು.
ನೇಕಾರ ಸಂತ ಮತ್ತು ಆದ್ಯ ವಚನಕಾರ
ಮುದನೂರು ನೆನೆಯಯ್ಯ
ಮುದದಿಂದ ಹಾಡಯ್ಯ
ಹೃದಯದೊಳು ಕುಳಿತಿರಲಿ ದಾಸಿಮಯ್ಯ |
ಸುಧೆಯೆಂಬ ವಚನಗಳ
ಪದುಳದಿಂದಲಿ ರಚಿಸಿ
ಮೆದುಳನ್ನು ತಿದ್ದಿರುವ ದಾಸಿಮಯ್ಯ ||೧||
ನೇಮದಿಂದಲಿ ದೇವ
ರಾಮನಾಥನ ಭಜಿಸಿ
ತಾಮಸವ ಸರಿಸಿರುವ ದಾಸಿಮಯ್ಯ |
ಪಾಮರರ ಮತಿ ತಿದ್ದಿ
ಕಾಮ ರೋಷವನಳಿಸಿ
ಧಾಮವನು ಹರಡಿರುವ ದಾಸಿಮಯ್ಯ ||೨||
ವಿಪಿನದೊಳು ಕೂರುತ್ತ
ತಪವಗೈಯುತ ಶಿವನ
ಸುಫಲವನು ಪಡೆದಂಥ ದಾಸಿಮಯ್ಯ |
ರಪಣವನು ಬಯಸದೇ
ಲಪನವನ್ನರಳಿಸುತ
ಕಪಟಿಗಳ ಮನ ತೊಳೆದ ದಾಸಿಮಯ್ಯ ||೩||
ಸತಿಸುತೆಯರೊಡಗೂಡಿ
ಸತತ ತುತಿಸುತ ಶಿವನ
ಪೃಥುಲ ಮನವನು ಮೆರೆದ ದಾಸಿಮಯ್ಯ |
ಕಥನಗಳು ಹಲವಯ್ಯ
ನತಿಸುವೆವು ನಿಮಗಯ್ಯ
ಸುತರನ್ನು ಪೊರೆವಂಥ ದಾಸಿಮಯ್ಯ ||೪||
ದುಗ್ಗಳೆಯ ಜೊತೆಗೂಡಿ
ಹಿಗ್ಗಿನೊಳು ಬಟ್ಟೆಯನು
ಮಗ್ಗದೊಳು ನೇಯ್ದಿರುವ ದಾಸಿಮಯ್ಯ |
ತಗ್ಗಿಸದೆ ಶಿರವನ್ನು
ನುಗ್ಗಿ ಸಾಗಲು ಮುಂದೆ
ಸಗ್ಗವನು ಕರುಣಿಸಿದ ದಾಸಿಮಯ್ಯ ||೫||
ಸುರರಿಗೊಪ್ಪಿಸುತಲೀ
ನರರಿಗೂ ನೀಡುತಲೀ
ಪರಶಿವನ ಪೂಜಿಸಿದ ದಾಸಿಮಯ್ಯ |
ಧರೆಯ ಮಂದಿಗೆ ತಮ್ಮ
ಮರಿಯಾದೆ ರಕ್ಷಿಸಲು
ವರವಾಯ್ತು ಬಟ್ಟೆಗಳು ದಾಸಿಮಯ್ಯ ||೬||
ವಚನಗಳ ನಾ ಮರೆಯೆ
ರುಚಿರ ಮನದಲಿ ಪೊರೆವೆ
ವಿಚಲಿತನು ನಾನಾಗೆ ದಾಸಿಮಯ್ಯ |
ಪ್ರಚಲಿತವಗೊಳಿಸುವೆನು
ರಚಿಸಿರುವ ವಚನಗಳ
ಸುಚರಿತನು ನಾನಾಗಿ ದಾಸಿಮಯ್ಯ ||೭||
( ಕುಸುಮ ಷಟ್ಪದಿಯ ಪದ್ಯ ರೂಪದಲ್ಲಿ ದಾಸಿಮಯ್ಯನ ವಿವರ ನೀಡಲಾಗಿದೆ. ಗದ್ಯ ರೂಪದಲ್ಲಿ ಮುಂದಿನ ಭಾಗದಲ್ಲಿ)
( ಭಾಗ 2 – ನಿರೀಕ್ಷಿಸಿ)
ಶೋಭಾ ಹರಿಪ್ರಸಾದ ಶೆಟ್ಟಿಗಾರ
ಉಡುಪಿ
( ಮಹಿಳಾ ವೇದಿಕೆಯಿಂದ)