ತುಂಬಿದ ಕೊಡ ಸುಮತಿ ಈಶ್ವರ ಶೆಟ್ಟಿಗಾರ್
ಇವರು ಬೇರಾರೂ ಅಲ್ಲ ಪ್ರತಿಯೊಬ್ಬರೊಂದಿಗೆ ಆತ್ಮೀಯವಾಗಿ ಬೆರೆತು ಮಾತನಾಡುವ ಶ್ರೀಮತಿ ಹೇಮಲತಾ ಕೆಳಾರ್ಕಳ ಬೆಟ್ಟು ಇವರ ಹಿರಿಯಕ್ಕ ಸುಮತಿ ಕುಕ್ಕಿಕಟ್ಟೆ. 1933 ರ ಅಗಸ್ಟ್ ಹದಿನೆಂಟರಂದು ಉಡುಪಿಯ ಅಲೆವೂರಿನಲ್ಲಿ ಜನಿಸಿದವರು. ಇವರು ಚಿಕ್ಕವರಿರುವಾಗಲೇ ಪಕ್ಕದ ಕುಕ್ಕಿಕಟ್ಟೆಗೆ ಹೆತ್ತವರು ವಾಸ್ತವ್ಯ ಬದಲಾಯಿಸಿದ್ದರು. ಏಳು ಮಕ್ಕಳಲ್ಲಿ ಇವರು ಹಿರಿಯರು. ಈಗವರ ವಯಸ್ಸು 92 ರ ಸನಿಹ. ನಾನು ಕುಕ್ಕಿಕಟ್ಟೆಯವಳೇ ಆಗಿದ್ದರೂ ಇತ್ತೀಚೆಗೆ ನೆಲೆಸಿರುವ ಕಾರಣ ಸುಮತಿ ಈಶ್ವರ ಶೆಟ್ಟಿಗಾರ್ ಇವರನ್ನು ನೋಡಿಲ್ಲ. ಭಾವ ಚಿತ್ರ ನೋಡಿದ್ದು ಮಾತ್ರ. ಏನೋ ಸೆಳೆತ. ಗೌರವ ಹುಟ್ಟಿಸುವ ಮೊಗಾರವಿಂದ. ನಮ್ಮ ಹಿರಿಯ ಮಹಿಳೆಯರೇ ಹಾಗೇ ಅಲ್ವಾ ? ಸರಳ ಸುಂದರಿಯರು. ಒಮ್ಮೆ ನೋಡಿದವರನ್ನು ಮತ್ತೊಮ್ಮೆ ನೋಡ ಬೇಕೆಂಬ ಬಯಕೆ ಉಂಟಾಗದೇ ಇರದು . ಬಹುಶಃ ಅವರ ವೇಷಭೂಷಣವೇ ಬಲು ಚೆಂದ.
ಎಳೆ ವಯಸ್ಸಿನಲ್ಲಿ ಹೇಗಿದ್ದಿರ ಬಹುದು ಇವರು ?. ನನ್ನದೇ ಕಾಲ್ಪನಿಕ ಲೋಕಕೆ ಜಾರಿದಾಗ ಪುಟಿದೆದ್ದ ಸಾಲುಗಳು
ಹೊಳೆವ ಬಳೆಗಳ ತೊಟ್ಟು ಚೆಲುವ ಸೀರೆಯನುಟ್ಟು
ತಲೆ ತುಂಬ ಹೂವು ಮುಡಿದಾಕಿ / ಬಂದಾಗ
ಹೊಲದಾಗ ಹಸಿರು ನಕ್ಕಂತೆ ||
(ಶೋಹ)
ಚಿಕ್ಕ ವಯಸ್ಸಿನಲ್ಲೇ ಮದುವೆ . ಆತ್ರಾಡಿಯ ಈಶ್ವರ ಶೆಟ್ಟಿಗಾರರೊಂದಿಗೆ. ಪತಿಯ ಉದ್ಯೋಗ ಮಹಾರಾಷ್ಟ್ರದ ಮುಂಬಯಿಯಲ್ಲಿ.. ದೂರದ ಊರು . ಮನೆಯ ಮಂದಿಗೆ ಆತಂಕ ಸಹಜ. ಆದರೆ ಸುಮತಿಯಮ್ಮ ಮೃದುವಾದರೂ ದಿಟ್ಟ ಮಹಿಳೆ. ಪತಿಯು ಉದ್ಯೋಗದಿಂದ ನಿವೃತ್ತಿಯಾಗುವ ತನಕ ಮುಂಬಯಿಯಲ್ಲಿ ವಾಸವಾಗಿದ್ದರು. ಮಕ್ಕಳಿಬ್ಬರ ವಿದ್ಯಾಭ್ಯಾಸ ಅಲ್ಲೇ ನಡೆಯಿತು.
ಕುಕ್ಕಿಕಟ್ಟೆಯಲ್ಲಿ ಸ್ವಂತ ಮನೆಯಲ್ಲಿ ವಾಸವಿದ್ದ ಸುಮತಿಯಮ್ಮ ತನ್ನ ಪತಿಯ ನಿಧನದ ಬಳಿಕ ಪರ್ಕಳದ ತನ್ನ ಮಗಳ ಮನೆಯಲ್ಲಿ ನೆಲೆಸಿರುವರು. ವಯೋ ಸಹಜ ಆರೋಗ್ಯ ಸಮಸ್ಯೆಗಳಿದ್ದರೂ ತನ್ನ ಕೆಲಸ ತಾನೇ ಮಾಡಿಕೊಳ್ಳುವಷ್ಟು ಸಮರ್ಥರು.
ಹಿರಿಯಕ್ಕನ ಬಗ್ಗೆ ಕಿರಿಯ ತಂಗಿ ಹೇಮಲತಾರವರು ಭಾವುಕರಾಗಿ ಹೀಗೆ ನುಡಿಯುವರು – “ಅವರು ಹಿರಿಯಕ್ಕ ಅಲ್ಲ. ನಮಗೆ ತಾಯಿಯಿದ್ದಂತೆ. ಅವರು ಶೋಭಾನೆ ,ಭಜನೆ ಹಾಡುತ್ತಿದ್ದರೆ ಸುತ್ತ ಮೌನ ಆವರಿಸುತ್ತಿತ್ತು. ಕಂಠ ಮಾಧುರ್ಯ ಅಷ್ಟೊಂದು ಸೊಗಸಾಗಿತ್ತು. ಇತರರೊಡನೆ ಅವರು ಬೆರೆಯುತ್ತಿದ್ದ ರೀತಿ ನಮಗೆ ಮಾರ್ಗದರ್ಶನ. ಅಡುಗೆಯಲ್ಲಿ ಎತ್ತಿದ ಕೈ. ಈಗಲೂ ಆಗಾಗ ಅವರನ್ನು ಭೇಟಿ ಮಾಡುತ್ತಿರುತ್ತೇನೆ. ಅಮ್ಮನನ್ನೇ ಕಂಡು ಬಂದಷ್ಟು ಸಂತೋಷ ಆಗುವುದು “.
.
ಹಿರಿಯ ಪುತ್ರಿ ವನಿತಾರನ್ನು ಮಾತಾಡಿಸಿದಾಗ — “ನಮ್ಮಮ್ಮ ಬಹಳ ಮೃದುವಾದ ಮನಸ್ಸಿನ ಸರಳ ವ್ಯಕ್ತಿ. ನೆರೆಹೊರೆಯವರೊಂದಿಗೆ ಬೆರೆಯುತ್ತಿದ್ದ ರೀತಿ ಇತರರಿಗೆ ಮಾದರಿ. ಪಾಕ ಪ್ರವೀಣೆ. ಮನೆಗೆ ಬಂದವರಿಗೆ ಅವರ ಆತಿಥ್ಯ ಬಹಳ ಪ್ರಿಯ. ಬಗೆ ಬಗೆಯ ಖಾದ್ಯ ತಯಾರಿಸುತ್ತಿದ್ದರು. ಹಾಡುವುದರಲ್ಲೂ ಮುಂದು. ಕಸೂತಿ ,ಕರ ಕುಶಲ ಇತ್ಯಾದಿ ಅರಿತಿದ್ದರು. ಅವರ ಮಗಳೆನ್ನುವುದೇ ನನಗೆ ಹೆಮ್ಮೆಯ ಸಂಗತಿ “.
ಕಿರಿಯ ಪುತ್ರಿ ಗಾಯತ್ರಿ ತನ್ನಮ್ಮನ ಬಗ್ಗೆ ಹೀಗೆನ್ನುವರು — ” ಹೃದಯವಂತೆ ನಮ್ಮಮ್ಮ. ಪರೋಪಕಾರಿಯವರು. ತನಗಿಲ್ಲದಿದ್ದರೂ ಪರರಿಗಾಗಿ ಮಿಡಿವ ಮನಸ್ಸು. ಶುಭ ಸಮಾರಂಭಗಳಿದ್ದಾಗ ಪರಿಚಿತರ – ಬಂಧುಗಳ ಮನೆಯಲ್ಲಿ ಅವರು ತಾನೇ ಮುಂದಾಗಿ ನಿಂತು ಅಡುಗೆ ವ್ಯವಸ್ಥೆ ಮಾಡಿದ್ದೂ ಇದೆ. ತನಗೆ ಗೊತ್ತಿರುವ ವಿಶೇಷ ಅಡುಗೆಗಳನ್ನು ಇತರರಿಗೆ ಕಲಿಸಿದ್ದೂ ಇದೆ. ಭಜನೆ – ಶೋಭಾನೆ ಅವರಿಂದ ಕಲಿತವರು ಬಹಳಷ್ಟು ಮಂದಿ. ಅಪ್ಪನಿಗೆ ಎದುರಾಡಿದ್ದು ಕಂಡಿಲ್ಲ .ಹೊಂದಿ ಬದುಕಿದ್ದರು. ಅವರಿಬ್ಬರ ದಾಂಪತ್ಯ ಅಚ್ಚರಿ ಹುಟ್ಟಿಸುವಂಥದ್ದು.”
ನಾವೂ ಏನಾದರೂ ಅಕ್ಕನ ಬಗ್ಗೆ ಹೇಳ ಬೇಕು ಮುಂಬಯಿಯಲ್ಲಿ ನೆಲೆಸಿರುವ ತಂಗಿಯರಿಬ್ಬರ ಸಂದೇಶ. ಸರಿ ಎಂದೆ. ಜಯಂತಿ ಮತ್ತು ಯಶೋಧಾ ಇಬ್ಬರೂ ತಮ್ಮ ವಿದ್ಯಾಭ್ಯಾಸದ ಬಳಿಕ ಉದ್ಯೋಗ ಹುಡುಕಿಕೊಂಡು ಹೋದದ್ದಹ ಮುಂಬಯಿಯಿಗೆ. ಬಹುಶಃ ಹಿರಿಯಕ್ಕ – ಭಾವನ ಮೇಲಿದ್ದ ಪ್ರೀತಿ ಭರವಸೆ ಕಾರಣ ಇರ ಬಹುದು.
- ಅಕ್ಕನೆಂದರೆ ಆಲದ ಮರ. ಉದ್ಯೋಗಕ್ಕೆ – ಜೀವನಕ್ಕೆ ದಾರಿ ತೋರಿಸಿದವರು. ಅವರ ಕಾರಣಕ್ಕೆ ನಾವಿಷ್ಟು ಎತ್ತರಕ್ಕೆ ಬೆಳೆದಿರುವುದು . ದಾನ ಧರ್ಮದಲ್ಲಿ ಎತ್ತಿದ ಕೈ . ಯಾವ ಕಾಯಕವನ್ನಾದರೂ ಸುಲಭದಲ್ಲಿ ಗ್ರಹಿಸ ಬಲ್ಲವರು. ” ತಂಗಿ ಜಯಂತಿಯವರ ಹೇಳಿಕೆ.
ನಾಲ್ಕನೆಯ ತಂಗಿ ಯಶೋದಾ ರಮೇಶ ” ಸುಮತಿಯಕ್ಕ ಅಲ್ಲ ಅವರು ಸುಮತಿಯಮ್ಮ . ನಾನು , ನನ್ನಕ್ಕ ಜಯಂತಿ ,ಅಣ್ಣ ದಿವಂಗತ ಶಿವರಾಮ್ – ನಾವು ಮುಂಬಯಿಯಲ್ಲೇ ನೆಲೆ ಕಂಡುಕೊಳ್ಳುವಂತಾಗಿದ್ದು ಸುಮತಿಯಕ್ಕ – ಭಾವನವರಲ್ಲಿ ಇದ್ದ ಔದಾರ್ಯತೆಯಿಂದ. ಮುಂಬಯಿಯಲ್ಲಿ ನರ್ಸಿಂಗ್ ಕಲಿಯುತ್ತಿರುವಾಗ ನನ್ನ ಸ್ನೆಹಿತೆಯರಿಗೂ ಇವರು ಅಚ್ಚು ಮೆಚ್ಚಿನ ಅಕ್ಕ. ಅನಿವಾರ್ಯ ಕಾರಣದಿಂದ ಹಾಸ್ಟೆಲ್ ನಲ್ಲಿ ನಿಲ್ಲ ಬೇಕಾದ ಸಂದರ್ಭದಲ್ಲಿ ಅಕ್ಕನ ಮನೆಗೆ ಬರುವುದನ್ನು ತಪ್ಪಿಸಿರಲಿಲ್ಲ . ಅಕ್ಕನ ಬಗ್ಗೆ ಹೇಳ ಹೊರಟರೆ ಒಂದು ಕಾದಂಬರಿಯೇ ರಚನೆಯಾಗ ಬಹುದು ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವರು.
ಶಾಂತ ಎನ್ನುವವರು ಎರಡನೆಯವರಾಗಿದ್ದು , ದಿವಂಗತ ವೇದಾವತಿಯವರು ನಾಲ್ಕನೆಯವರು.
ಇಷ್ಟು ಸಾಕಷ್ಟಾಯಿತು. ಇನ್ನೂ ಹೆಚ್ಚಿನ ಮಾಹಿತಿ ಸಿಗಲಿಲ್ಲ.
ಶ್ರೀ ದೇವರು ಒಳ್ಳೆಯ ಆರೋಗ್ಯ ನೀಡಿ ಕಾಪಾಡಲಿ. ಶರಣು ತಾಯಿ
ಸಹಕಾರ : ಶ್ರೀಮತಿ ಹೇಮಲತಾ ಕೆಳಾರ್ಕಳಬೆಟ್ಟು
ಲೇಖನ ತಯಾರಿ : ಶ್ರೀಮತಿ ಶೋಭಾ ಹರಿಪ್ರಸಾದ