ಸುರತ್ಕಲ್ಲು ಪೇಟೆಯಿಂದ ಸುಮಾರು ಅರ್ಧಮೈಲು ಉತ್ತರಕ್ಕೆ ತಡಂಬೈಲು ಮತ್ತು ಬಾಕಿಮಾರು ಎಂಬ ಗದ್ದೆಗಳ ನಡುವೆ ಸಹಸ್ರ ವರ್ಷಗಳಷ್ಟು ಪ್ರಾಚೀನವಾದ ಶ್ರೀ ಪುರಾತನ ಮಾರಿಯಮ್ಮ ದೇವಸ್ಥಾನ ಮತ್ತು ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನಗಳು ಇವೆ.
ಶ್ರೀ ದೇವಿಯ ಆಗಮನ : ಕೇರಳದ ಮಳೆಯಾಳಿ ಭಾಷಿಕರ ರಾಜಮನೆತನದಲ್ಲಿ ಪೂಜಿಸಲ್ಪಡುತ್ತಿದ್ದ ಶ್ರೀ ದೇವಿಯು ಪೂಜೆ ಮತ್ತು ವಿನಿಯೋಗಾದಿಗಳಲ್ಲಿ ದೋಷಗಳುಂಟಾದಾಗ ಕೋಪಗೊಂಡು ರಾಜವಂಶವನ್ನು ಶಪಿಸಿ ಉತ್ತರ ದಿಕ್ಕಿಗೆ ಬಂದು ಸುರತ್ಕಲ್ಲಿನಲ್ಲಿ ನೆಲೆಗೊಂಡ ಶ್ರೀ ಸದಾಶಿವ ಮಹಾಲಿಂಗೇಶ್ವರ ದೇವರ ಸಂದರ್ಶನ ಮಾಡಿ ದೇವರ ಆದೇಶದಂತೆ ತಡಂಬೈಲು ಬಾಕಿಮಾರು ಗದ್ದೆಯ ಪ್ರದೇಶದಲ್ಲಿ ನೆಲೆಗೊಂಡಳೆಂಬುದು ಇತಿಹಾಸ. ದೇವಿಯು ತನ್ನ ಮಹಿಮೆಯಿಂದ ಜನರಲ್ಲಿ ಭಯ ಹೆಚ್ಚಿಸಿ ಭಕ್ತಿ ಬರುವಂತೆ ಮಾಡಿದಳು. ಹಾಗಾಗಿ ಐದು ಮಾಗಣೆಯ ಮತ್ತು ಹದಿನೇಳು ಗ್ರಾಮದ ಭಕ್ತಾದಿಗಳು ಮಾರಿಗುಡಿಯನ್ನು ಸ್ಥಾಪಿಸಿ ಕಾಲಾವಧಿಯಲ್ಲಿ ಮಾರಿ ಪೂಜೆಯನ್ನು ಆಚರಿಸುತ್ತ ಬಂದರು. ದೇವಿಯು ದರ್ಶನ ರೂಪದಲ್ಲಿ ಪಾತ್ರಿಗಳ ಮೇಲೆ ಆವೇಶಿತಳಾಗಿ ಭಕ್ತರ ನಂಬಿಕೆಯನ್ನು ಸತ್ಯವಾಗಿಸಿದಳು. ಶ್ರೀದೇವಿಯು ಭದ್ರಕಾಳಿ, ಮಹಾಕಾಳಿ ಮತ್ತು ದುರ್ಗಾದೇವಿ ಎಂಬುದಾಗಿ ತ್ರೈರೂಪಿಣಿಯಾಗಿ ಭಕ್ತರ ಅಭೀಷ್ವಗಳನ್ನು ನೆರವೇರಿಸುತ್ತಿರುವಳು.
ರಾಣಿ ಮಹಾರಾಣಿ ಉಗ್ರದೇವತೆಗಳ ಆಗಮನ: ರಾಣಿ ಮಹಾರಾಣಿಯರೆಂಬ ಉಗ್ರದೇವತೆಗಳನ್ನು ಪೂಜಿಸುತ್ತಿದ್ದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವಾಸಿಸುತ್ತಿದ್ದು ಮಾದಿಗರು ಎಂಬ ಜನಾಂಗದವರು ಮಳೆಬಾರದೆ ಕ್ಷಾಮ ಉಂಟಾದಾಗ ಸುರತ್ಕಲ್ಲನ್ನು ಸೇರಿ ತಡಂಬೈಲು ಬಾಕಿಮಾರು ಸ್ಥಳಗಳಲ್ಲಿ ನೆಲೆಯೂರಿ ಈ ದೇವತೆಗಳನ್ನು ಆರಾಧಿಸತೊಡಗಿದರು. ಈ ದೇವತೆಗಳು ಶ್ರೀಕ್ಷೇತ್ರದ ಪ್ರಭಾವಕ್ಕೊಳಗಾಗಿ ಶ್ರೀದೇವಿಗೆ ಅಭಿಮುಖವಾಗಿ ನೆಲೆಗೊಂಡವು. ಈ ದೇವತೆಗಳಿಗೆ ಉತ್ಸವದ ಕಾಲದಲ್ಲಿ ವಾಡಿಕೆಯಂತೆ ಮಾದಿಗ ಪಂಗಡದವರಿಂದ ಪೂಜಾವಿಧಿಗಳು ನಡೆಯುತ್ತಿವೆ. ಕ್ಷೇತ್ರಪಾಲಕ ಗುಳಿಗ: ಕ್ಷೇತ್ರವನ್ನು ರಕ್ಷಿಸುವ ದೃಷ್ಟಿಯಿಂದ ಕ್ಷೇತ್ರ ರಕ್ಷಕನಾಗಿ ಗುಳಿಗ ದೈವವನ್ನು ಪ್ರತಿμÁ್ಠಪಿಸಲಾಗಿದ್ದು ಪೂಜೆ ಕೈಗೊಳ್ಳುತ್ತಿರುವನು.
ಮಂಗಳವಾರದ ದರ್ಶನ : ಪ್ರತಿ ಮಂಗಳವಾರ ಕ್ಷೇತ್ರದಲ್ಲಿ ಶ್ರೀ ದೇವಿಯ ದರ್ಶನ ಸೇವೆಯಿಂದ ಭಕ್ತಾದಿಗಳು ತಮ್ಮ ಕಷ್ಟಗಳನ್ನು ಸನ್ನಿಧಾನದಲ್ಲಿ ಅರಿಕೆ ಮಾಡಿ ಪರಿಹಾರ ಕಂಡುಕೊಳ್ಳುತ್ತಾರೆ. ಮಂಗಳವಾರದ ದಿನಗಳಲ್ಲಿ ಹೂವಿನ ಪೂಜೆ, ಗದ್ದಿಗೆ ಪೂಜೆ, ತುಲಾಭಾರ ಸೇವೆ, ಪಾಯಸ ನೈವೇದ್ಯ ಸೇವೆ ಇತ್ಯಾದಿ ಸೇವೆಗಳು ಜರಗುವವು.
ಧೂಮಾವತಿ ದೈವದ ಆಗಮನ : ಪದ್ಮಶಾಲಿಗರಾದ ಸಾಂತ ಶೆಟ್ಟಿ ಎಂಬವರು ತನ್ನ ಬಟ್ಟೆ ವ್ಯಾಪಾರ ಮಾಡುವ ಸಂದರ್ಭದಲ್ಲಿ ತಾಂಗಾಡಿ (ಕಟೀಲಿನ ಬಳಿ) ಇರುವ ಬ್ರಾಹ್ಮಣರ ಮನೆಯೊಂದರಲ್ಲಿ ಧೂಮಾವತಿ ದೈವದ ನೇಮ ನಡೆಯುತ್ತಿರುವುದನ್ನು ಗಮನಿಸಿ ನೇಮ ನೋಡುವ ಉತ್ಸಾಹದಿಂದ ತಲೆಹೊರೆಯನ್ನು ಮನೆಯ ಜಗಲಿಯಲ್ಲಿರಿಸಿದುದನ್ನು ಕಂಡ ಮನೆಯೊಡತಿಯು ಬಳಲಿದ ವ್ಯಕ್ತಿಯನ್ನು ಕಂಡು ಅನ್ನಪಾನಾದಿಗಳು ಮುಗಿದಿದ್ದ ಕಾರಣ ಧೂಮಾವತಿ ದೈವದ ಪಾರಣೆಗೆಂದು ತಯಾರಿಸಿದ ಕಡುಬನ್ನು ಅವರಿಗೆ ಉಣಬಡಿಸಿದಳು. ಈ ವಿಷಯವನ್ನು ತಿಳಿದ ಧೂಮಾವತಿ ದೈವವು ಪ್ರಸಾದ ನೀಡುವ ವೇಳೆ ತನಗಾಗಿ ತಯಾರಿಸಿದ ಕಡುಬನ್ನು ತಿಂದ ಕಾರಣದಿಂದ ಸಾಂತ ಶೆಟ್ಟಿಯ ಮನೆಗೆ ಬರುವುದಾಗಿಯೂ ತನಗೆ ಎಲ್ಲ ವ್ಯವಸ್ಥೆ ಮಾಡಬೇಕಾಗಿಯೂ ಬೇಡಿಕೆ ನೀಡಿತಂತೆ. ಅಲ್ಲದೆ ತನ್ನ ಮಹಾತ್ಮೆಯನ್ನು ಪ್ರಕಟಪಡಿಸಲು ಕೆಲವು ಪವಾಡಗಳನ್ನು ಮಾಡಿತೆಂದು ತಿಳಿದು ಬಂದಿದೆ. ಸಾಂತ ಶೆಟ್ಟಿಯವರು ಧೂಮಾವತಿ ದೈವಕ್ಕೆ ಗುಡಿಕಟ್ಟಲು ಸುರತ್ಕಲ್ ಜಂಗಮ ಮಠಕ್ಕೆ ಹೋಗಿ ಮಠಾಧೀಶರಾದ ಮಹಾಂತಯ್ಯನವರಲ್ಲಿ ಜಾಗ ಕೇಳಿದಾಗ ಕೊಡಲೊಪ್ಪದಾಗ ನಿರಾಶೆಯಿಂದ ಮನೆಗೆ ಬಂದರು. ಆದರೆ ಮಠಾಧೀಶರಿಗೆ ಧೂಮಾವತಿ ದೈವವು ವಿವಿಧ ರೀತಿಯ ಶಿಕ್ಷೆಯನ್ನು ನೀಡಿದುದರಿಂದ ಮಹಾಂತಯ್ಯನವರು ಜಾಗ ನೀಡಲು ಒಪ್ಪಿಗೆ ನೀಡಿದರು. ಅವರು ನೀಡಿದ ಜಾಗದಲ್ಲಿ ಪ್ರಕೃತ ಧೂಮಾವತಿ ಮತ್ತು ಬಂಟ ದೈವಗಳ ದರ್ಶನವು ನಡೆಯುತ್ತದೆ. ಕ್ಷೇತ್ರದಲ್ಲಿ ಧೂಮಾವತಿ ಮತ್ತು ಬಂಟ ದೈವಗಳೊಂದಿಗೆ ಪಂಜುರ್ಲಿ, ಬೊಬ್ಬರ್ಯ ದೈವಗಳು ಪೂಜಿಸಲ್ಪಡುತ್ತಿವೆ.
ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನ :
ಶ್ರೀ ಕ್ಷೇತ್ರದಲ್ಲಿ ಶ್ರೀ ವೀರಭದ್ರ, ಶ್ರೀ ದುರ್ಗಾಪರಮೇಶ್ವರೀ ಮತ್ತು ಶ್ರೀ ಗಣಪತಿ ದೇವರುಗಳು ಆರಾಧಿಸಲ್ಪಡುತ್ತಿದ್ದಾರೆ. ಬ್ರಾಹ್ಮಣ ವರ್ಗದವರಿಂದ ಈ ದೇವರುಗಳಿಗೆ ಪೂಜೆ ನಡೆಯುತ್ತಿದೆ. ವೀರಭದ್ರ ದೇವಸ್ಥಾನದಲ್ಲಿ ವμರ್Áವಧಿ ಜಾತ್ರೆಯು ಮಾಘ ಶುದ್ಧ ಪಾಡ್ಯಕ್ಕೆ ಪ್ರಾರಂಭವಾಗಿ ಐದು ದಿನಗಳ ಕಾಲ ನಡೆಯುವುದು. ಒಂದನೆಯ ದಿನ ಬಯನಬಲಿ, ಎರಡನೆಯ ದಿನ ಬಡಗುಸವಾರಿ, ಮೂರನೆಯ ದಿನ ತೆಂಕುಸವಾರಿ ಮತ್ತು ನಾಲ್ಕನೆಯ ದಿನ ರಥೋತ್ಸವ, ರಂಗಪೂಜೆ ಮತ್ತು ಶಯನೋತ್ಸವಗಳು ನಡೆಯುತ್ತವೆ. ಐದನೆಯ ದಿನ ವಿಶೇಷವಾಗಿ ಧೂಮಾವತಿ ಮತ್ತು ಬಂಟದೈವಗಳ ನೇಮ ಜರಗುವುದು.
ವಿಶೇಷ ಪೂಜೆಗಳು :
ಗಣೇಶಚತುರ್ಥಿ, ನವರಾತ್ರಿ ಮತ್ತು ದೀಪಾವಳಿ ಹಬ್ಬಗಳು ಕ್ಷೇತ್ರದಲ್ಲಿ ಆಚರಿಸಲ್ಪಡುತ್ತದೆ. ಈ ಪುರಾತನ ಮಾರಿಯಮ್ಮ ದೇವಸ್ಥಾನದಲ್ಲಿ ಕಾಲಾವಧಿಯಲ್ಲೂ ಮೀನಮಾಸದಲ್ಲಿ ಮಾರಿಪೂಜೆ ಜರಗುವುದು. ಊರ ಪರವೂರ ಭಕ್ತಾದಿಗಳು ಈ ಉತ್ಸವದಲ್ಲಿ ಪಾಲ್ಗೊಳ್ಳುವರು ಮಾರಿಪೂಜೆಯ ದಿನ ದೇವಿ ದರ್ಶನ ಮತ್ತು ದೈವಗಳ ದರ್ಶನ ಇರುವುದು. ಅಲ್ಲದೆ ಆμÁಡ ತಿಂಗಳಲ್ಲಿ ಆಟಿಯ ಮಾರಿಪೂಜೆ ಉತ್ಸವವು ವಿಜೃಂಭಣೆಯಿಂದ ನೆರವೇರುವುದು.
ಕ್ಷೇತ್ರ ಸಂಬಂಧಿ ಸಂಸ್ಥೆಗಳು :
ಮುಂಬೈಯಲ್ಲಿರುವ ಕ್ಷೇತ್ರದ ಪದ್ಮಶಾಲಿ ಬಂಧುಗಳು `ಐದು ಮಾಗಣೆ ಪದ್ಮಶಾಲಿ ಕುಲದೇವತಾ ಸಂಘ’ವೆಂಬ ಸಂಸ್ಥೆಯನ್ನು ಸ್ಥಾಪಿಸಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಯಕ್ಷಗಾನಾಸಕ್ತರಾದ ಮುಂಬೈಯ ಭಕ್ತರು ‘ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಸಭಾ’ ಎಂಬ ಹೆಸರಿನಲ್ಲಿ ಮೇಳವನ್ನು ಸ್ಥಾಪಿಸಿರುತ್ತಾರೆ. ಈ ಮೇಳದ ಯಕ್ಷಗಾನ ಪ್ರದರ್ಶನಗಳು ಮುಂಬೈ ಮತ್ತು ಅನ್ಯ ಪ್ರದೇಶಗಳಲ್ಲಿ ಜರಗಿರುತ್ತವೆ.
ಸುರತ್ಕಲ್ಲಿನಲ್ಲಿ “ಶ್ರೀ ದುರ್ಗಾಪರಮೇಶ್ವರೀಯಕ್ಷಗಾನ ಸಭಾ” ಸುಮಾರು ಐವತ್ತು ವರ್ಷಗಳಿಂದ ನವರಾತ್ರಿಯ ಕಾಲದಲ್ಲಿ ಬಯಲಾಟಗಳನ್ನು ಆಯೋಜಿಸುತ್ತಿದೆ. ಊರ ಮತ್ತು ಪರವೂರಿನ ಕಲಾವಿದರು ಕ್ಷೇತ್ರದಲ್ಲಿ ಯಕ್ಷಗಾನ ಸೇವೆಯನ್ನು ಮಾಡುತ್ತಿದ್ದಾರೆ. ಸ್ಥಳೀಯ ಯುವಕ ಮಂಡಳಿಯು ಶ್ರೀ ದೇವಿಯ ಕಲಾಪಗಳು ಯಶಸ್ವಿಯಾಗಿ ಜರಗಲು ಅನುಕೂಲವಾಗುವಂತೆ ಶ್ರೀ ದುರ್ಗಾಪರಮೇಶ್ವರೀ ದಳಿದೀಪಾರಾಧನ ಸಮಿತಿಯನ್ನು ರಚಿಸಿ ಉತ್ಸವ ಕಾಲದಲ್ಲಿ ದೇವಸ್ಥಾನವನ್ನು ಶೃಂಗರಿಸುವ ಕೆಲಸವನ್ನು ಕೈಗೊಳ್ಳುತ್ತಾರೆ. “ಶ್ರೀ ಭದ್ರಕಾಳಿ ವ್ಯಾಯಾಮ ಶಾಲೆ”ಯು ಶ್ರೀ ಕ್ಷೇತ್ರದ ಸಂಸ್ಥೆಗಳಲ್ಲೊಂದಾಗಿದ್ದು ವ್ಯಾಯಾಮವನ್ನು ಅಭ್ಯಾಸ ಮಾಡುವುದರೊಂದಿಗೆ ಸೇವಾರೂಪದಲ್ಲಿ ಪ್ರದರ್ಶನವನ್ನು ಮಾಡುತ್ತಿರುತ್ತದೆ.
ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳುವುದಕ್ಕೆ ಆಡಳಿತ ಸಮಿತಿ ಇರುತ್ತದೆ. ಅಲ್ಲದೆ ಸುರತ್ಕಲ್ಲು ಮಿಜಾರು, ಎಕ್ಕಾರು, ಮಂಗಳಪೇಟೆ ಮತ್ತು ಸಸಿಹಿತ್ಲು ಎಂಬ ಐದು ಮಾಗಣೆಗಳಿಗೆ ಒಟ್ಟು ಆರು ಜನ ಗುರಿಕಾರರು ಆಡಳಿತದಲ್ಲಿ ಸಹಭಾಗಿಗಳಾಗುತ್ತಾರೆ. ಇಲ್ಲಿಯ ಎರಡೂ ದೇವಸ್ಥಾನಗಳ ಅರ್ಚಕರ ಸ್ಥಾನಗಳು ವಂಶಪರಂಪರೆಯಿಂದ ಬಂದವುಗಳಾಗಿದ್ದು ಕ್ರಮಾಗತವಾಗಿ ನಡೆಯುತ್ತಿದೆ. ಶ್ರೀದೇವಿಯು ಸಮಸ್ತರಿಗೂ ಸನ್ಮಂಗಳವನ್ನು ಉಂಟು ಮಾಡಲೆಂದು ಪ್ರಾರ್ಥಿಸೋಣ.