“ತರಕಾರಿ ಹೊತ್ತು ತಂದೆವು ನಾವು ತರಕಾರಿ ಹೊತ್ತು ತಂದೆವು
ಶಾರಕ್ಕ ,ಪಾರಕ್ಕ ,ಬೇಗನೇ ಬನ್ರಕ್ಕ ತರಕಾರಿ ಹೊತ್ತು ತಂದೆವು”
– ಚಿಕ್ಕವಳಿರುವಾಗ ಶಾಲಾ ವಾರ್ಷಿಕೋತ್ಸವ ದಿನ ತಲೆಯ ಮೇಲೆ ಬುಟ್ಟಿ ಹೊತ್ತು ನಮ್ಮ ಅಕ್ಕಂದಿರು ಮಾಡುತ್ತಿದ್ದ ನೃತ್ಯವನ್ನು ಕಂಗಳರಳಿಸಿ ನೋಡಿದ ನೆನಪು ಮಾಸುವುದೆಂತು.
ಸಾಂಬ್ರಾಣಿ ಗಡ್ಡೆ , ಬೆಂಡೆ ಕಾಯಿ , ತೊಂಡೆ ಕಾಯಿ , ಹೀರೇಕಾಯಿ ,ಅಲಸಂಡೆ , ಶುಂಠಿ ,ಸೌತೆ , ಬಸಳೆ ಸೊಪ್ಪು , ಹರಿವೆ ಸೊಪ್ಪು ಇತ್ಯಾದಿ ನಾವು ಚಿಕ್ಕವರಿದ್ದಾಗ ನಮ್ಮ ಮನೆಯೆದುರು ಹಿತ್ತಲಲ್ಲಿ ಪ್ರತಿ ವರ್ಷವು ನಮ್ಮಮ್ಮನ ಶ್ರಮದಿಂದ ಕಂಗೊಳಿಸುತ್ತಿದ್ದ ಸಾವಯವ ತರಕಾರಿಗಳು. ಒಂದು ಸಾಲು ಕೆಂಪು ಗೆಣಸು ಬೇರೆ. ಚಿಕ್ಕವರಿರುವಾಗ ಅಮ್ಮನೊಂದಿಗೆ ನಾವು ಮಕ್ಕಳು ಕೈ ಜೋಡಿಸುತ್ತಿದ್ದೆವು. ದರಲೆ ಮಿಶ್ರಿತ ನಮ್ಮದೇ ಹಟ್ಟಿಯ ಗೊಬ್ಬರ , ಸಮಯಕ್ಕೆ ಸರಿಯಾಗಿ ಸಿಗುತ್ತಿದ್ದ ನೀರು ಗಿಡಗಳ ಬೆಳವಣಿಗೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತಿದ್ದವು.
ಮನೆಯ ಅಡುಗೆಗೆ ಸಾಕಾಗಿ ಅಕ್ಕ ಪಕ್ಕದವರಿಗೂ ಹಂಚುವ ಖುಷಿ. ಕಡಿಮೆಯೆಂದರೂ ವರ್ಷದ ಆರೆಂಟು ತಿಂಗಳು ನಾವೇ ಬೆಳೆಸಿದ ತರಕಾರಿ ಸವಿಯುವ ಸಂಭ್ರಮ. ಚಳಿಗಾಲದ ಸಮಯ ನಮ್ಮ ಅಂಗಡಿಯಿಂದಲೋ ಬ್ರಹ್ಮಾವರದ ಸೋಮವಾರದ ಸಂತೆಯಿಂದಲೋ ತಂದ ಬಟಾಟೆ ಈರುಳ್ಳಿ ಇಟ್ಟಲ್ಲೇ ಮೊಳಕೆಯೊಡೆದಾಗ ಅದನ್ನು ಕತ್ತರಿಸಿ ಮಣ್ಣೊಳಗೆ ಇಟ್ಟು ಕಾದು ಸೋತದ್ದೂ ಇದೆ. ಸುವರ್ಣ ಗಡ್ಡೆಯಷ್ಟು ನಿಷ್ಠೆ ಬಟಾಟೆಗಿರಲಿಲ್ಲ. ಕಾರಣವೂ ಇದೆ ಎಲ್ಲಾ ತರಕಾರಿ ಗಡ್ಡೆ ಎಲ್ಲಾ ಕಡೆಯಲ್ಲಿ ಬೆಳೆಯುವುದಿಲ್ಲ.. ಆಯಾಯ ಪ್ರದೇಶದ ಮಣ್ಣು , ಹವಾಮಾನ ಎಲ್ಲವೂ ಮುಖ್ಯವಾಗಿರುತ್ತದೆ.
ವಿದ್ಯಾಭ್ಯಾಸ ಮುಗಿದ ಬಳಿಕ ಶಿಕ್ಷಕಿಯಾಗಿದ್ದೆ ಕೆಲವು ವರ್ಷ. ಆಗ ನಾನಿದ್ದದ್ದು ಚಿಕ್ಕಮ್ಮನ ಮನೆಯಲ್ಲಿ. ಅಮ್ಮನ ತಂಗಿ. ಅಮ್ಮನಿಗಿಂತಲೂ ಸ್ವಲ್ಪ ಹೆಚ್ಚೇ ಪ್ರೀತಿ ಅವರಲ್ಲಿ. ಹೆತ್ತಮ್ಮನಷ್ಟೇ ಪ್ರಿಯರು ಅವರು. ತರಕಾರಿ ಬೆಳೆಯುವುದರಲ್ಲಿ ನಮ್ಮಮ್ಮನಿಗಿಂತಲೂ ಹೆಚ್ಚು ಜಾಣೆ ಅವರು. ಇಂದಿಗೂ ತರಕಾರಿ ಬೆಳೆಯುವರು. ಮೊದಲಿನಷ್ಟು ಅಲ್ಲದಿದ್ದರೂ ಅಲ್ಪ ಸ್ವಲ್ಪ. ಅವರ ಮನೆಯೆದುರು ಮನೆಯಲ್ಲಿ ಜಯಶ್ರೀ ,ಆಶಾ ತನ್ನ ಮಕ್ಕಳೇ ಅನ್ನುವಷ್ಟು ಪ್ರೀತಿ ಅಕ್ಕರೆ ಅವರ ಮೇಲೆ ಚಿಕ್ಕಮ್ಮನಿಗೆ. ಇವರ ಮನೆ ತರಕಾರಿ ಅವರಿಗೆ ,ಅವರು ಬೆಳೆಸಿದ್ದು ಇವರಿಗೆ. ಚಿಕ್ಕಮ್ಮನ ಮನೆಯಲ್ಲಿ ನಾನು ಇದ್ದಾಗ ಯವಾಗಲೂ ಚಿಕ್ಕಮ್ಮ ಮಾಲತಿ – ಮಾಲಿನಿ ಎಂಬಿಬ್ಬರು ಅವಳಿ ಸೋದರಿಯರ ಬಗ್ಗೆ ಬಹಳ ಹೊಗಳುತ್ತಿದ್ದರು. ಇದ್ದರೆ ಅಂತಹ ಮಕ್ಕಳಿರ ಬೇಕು ಎಂದು.ಮಾಲತಿ – ಮಾಲಿನಿ ಚಿಕ್ಕ ವಯಸ್ಸಿನಲ್ಲೇ ಸಾಹಸಿಗಳಾಗಿ ಬೆಳೆದವರು. ನನಗಿಂತ ಚಿಕ್ಕವರು. ಈಗ ಇಬ್ಬರೂ ಸರಕಾರಿ ಉದ್ಯೋಗದಲ್ಲಿ ಇರುವರು. ಮಲ್ಲಿಗೆ ಕೃಷಿ ,ತರಕಾರಿ ಕೃಷಿ ,ಇತ್ಯಾದಿಗಳಲ್ಲಿ ಹೆತ್ತವರಿಗೆ ಸಾಕಷ್ಟು ನೆರವು ನೀಡುತ್ತಿದ್ದವರು.
ಮದುವೆಯ ಬಳಿಕ ಹಲವು ವರ್ಷ ಸೌದಿ ಅರೇಬಿಯಾದಲ್ಲಿ ಇದ್ದಿದ್ದೆ. ನನ್ನ ಯಜಮಾನರ ಕಂಪೆನಿಯಲ್ಲೇ ಕೆಲಸ ಮಾಡುತ್ತಿದ್ದ ಉಡುಪಿಯ ಹರೀಶ್ ಎನ್ನುವವರ ಮಡದಿ ಭಾಗ್ಯ ಲಕ್ಷ್ಮೀ . ಚಿಕ್ಕ ಬಾಲ್ಕನಿಯಲ್ಲೇ ಸೌತೆ , ಟೊಮ್ಯಾಟೊ ,ಹಸಿಮೆಣಸು ,ಬೆಂಡೆ …ನೆಟ್ಟಿದ್ದು ವಿಶೇಷ. ಸೌದಿ ಅರೇಬಿಯಾದಲ್ಲಿ ಬೆಳೆಸುವುದು ಅಷ್ಟೇನೂ ಸುಲಭದ ಕಾಯಕವಲ್ಲ. ಮಣ್ಣು ಅಂಗಡಿಯಿಂದಲೇ ಖರೀದಿಸ ಬೇಕು. ನನಗೆ ಬೆಳೆಸ ಬೇಕೆಂಬ ಹಂಬಲವಿದ್ದರೂ ನಾವಿದ್ದ ವಿಶಾಲ ಮನೆಗೆ ಬಾಲ್ಕನಿಯೇ ಇರಲಿಲ್ಲ. ಆ ದಿನಗಳಲ್ಲಿ ಕಂಡದ್ದು ಕನಸು ಮಾತ್ರ.
ಕಳೆದೆರಡು ವರ್ಷದಿಂದ ಊರಿನಲ್ಲಿ ವಾಸ . ಮನೆಯ ಸುತ್ತ ಬಳಕೆಗೆ ಸಿಗುವ ಸ್ಥಳ ಬಹಳ ಚಿಕ್ಕದು.. ಆದರೂ ಒಂದಷ್ಟು ಗಿಡಗಳು ಕುಂಡಗಳಲ್ಲಿ ಮತ್ತು ಒಂದಷ್ಟು ಗಿಡಗಳು ನೆಲದ ಮೇಲೆ. ಸಣ್ಣ ಪ್ರಮಾಣದಲ್ಲಿ ಯಶಸ್ಸು ಸಿಕ್ಕಿದೆ ಎನ್ನ ಬಹುದಷ್ಟೇ. ಹಿಂದೆ ಮಣ್ಣಿನಲ್ಲಿ ಇದ್ದ ಪರಿಶುದ್ಧತೆ ಇಂದಿನ ಮಣ್ಣಿನಲ್ಲಿ ಇಲ್ಲ. ಎರೆ ಹುಳ ಗೊಬ್ಬರ , ಕಹಿ ಬೇವು ಗೊಬ್ಬರ , ಹಸಿ ಕಸ ಇತ್ಯಾದಿ ಸಹಕಾರಿ. ತರಕಾರಿಯ ಗಾತ್ರ ದೊಡ್ಡದಾಗಿ ಇರದಿದ್ದರೂ ಅಡುಗೆ ಮಾಡಿ ತಿನ್ನುವಾಗ ಅದೇನೋ ಸಂತೃಪ್ತಿ.
ಕಳೆದ ವಾರ ಹಲ್ಲಿನ ಡಾಕ್ಟರ್ ಬಳಿ ಹೋಗಿದ್ದೆ. ಡಾಕ್ಟರ್ ಮತ್ತು ನರ್ಸ್ ನಡುವಿನ ಮಾತುಕತೆ ಕೇಳಿ ಖುಷಿಯಾಯಿತು. ಅವರು ತರಕಾರಿ ಕೃಷಿಯ ಬಗ್ಗೆಯೇ ಮಾತಾಡಿದ್ದು. ವೈದ್ಯರಿಗಿಂತ ದಾದಿಯವರೇ ಹೆಚ್ಚು ಪ್ರವೀಣರು ಈ ವಿಚಾರದಲ್ಲಿ. ಅಲ್ಲಿದ್ದ ನರ್ಸ್ ತನ್ನ ಮನೆಯ ಟೆರೇಸ್ನಲ್ಲಿ ತರಕಾರಿ ಬೆಳೆಯುತ್ತಿರುವ ವಿಷಯ ತಿಳಿಯಿತು. ಕಡಲೇ ಹಿಂಡಿ ನೆನೆಸಿಟ್ಟು ತರಕಾರಿ ಗಿಡಗಳ ಬುಡಕ್ಕೆ ಹಾಕ ಬೇಕೆಂದರು ಅವರು. ನಿಜ , ಎರಡು ಮಾತಿಲ್ಲ. ನೀರುಳ್ಳಿ ಸಿಪ್ಪೆ ನೆನೆಸಿಟ್ಟು ಬುಡಕ್ಕೆ ಹಾಕಿದ್ರೂ ಒಳ್ಳೆಯದು ಎಂದದ್ದೂ ಕೂಡಾ ಅವರೇ. ಅವರು ಕೊಟ್ಟ ಮೂರನೇ ಉಪಾಯ ” ಅಲೇ ( ಮೊಸರು) ಪಾಡೋಡ್ .ಮಸ್ತ್ ಎಡ್ಡೆ. ಯಂಕುಲ್ನಾ ಟೆರೇಸ್ಡ್ ಬಸಳೆ ಎಂಚ ಆತ್ತ್ಂಡ್ ಪಂಡಾ…..” ಎನ್ನುವಾಗ ಅವರ ಮೊಗದಲ್ಲೆದ್ದ ನಗು ಅವರ್ಣನೀಯ. ಏನೇನೋ ಪ್ರಯೋಗಗಳು. ಪರಿಣಾಮ ರೋಚಕ.
ಸಾವಯವ ತರಕಾರಿಯು ರಾಸಾಯನಿಕ ಗೊಬ್ಬರ ಬಳಸಿ ಪಡೆಯುವ ತರಕಾರಿಯ ಮುಂದೆ ಗಾತ್ರದಲ್ಲಿ ಚಿಕ್ಕದು. ಅದರ ಬೆಳವಣಿಗೆಯ ಹಿಂದೆ ಬಹಳಷ್ಟು ಶ್ರಮಬೇಕಾಗುವುದು. ಬೆಳೆಯಲು ಖರ್ಚು ಹೆಚ್ಚು. ಖರೀದಿಸ ಹೋದರೆ ಬೆಲೆ ಹೆಚ್ಚು. ” ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ” ಎಂಬಂತೆ ಸಾವಯವ ತರಕಾರಿಗಳ ಪರಾಕ್ರಮ ವರ್ಣನೆಗೆ ನಿಲುಕದ್ದು. ಅವುಗಳಿಂದ ನಮ್ಮ ದೇಹಕ್ಕೆ ದೊರೆಯುವ ಚೇತೋಹಾರಿ ಅಂಶಗಳು ಸಾಕಷ್ಟು. ಲವಲವಿಕೆಯಿಂದ ನಾವಿರಲು ಅತ್ಯುತ್ತಮ ಸಾವಯವ ತರಕಾರಿಗಳು – ದವಸ ಧಾನ್ಯಗಳು.
ನಾನೀಗ ಆರಂಭಿಕ ಹಂತದಲ್ಲಿ ಇರುವೆ. ನಿಮ್ಮಲ್ಲಿ ಸಾಕಷ್ಟು ಮಂದಿ ಈ ವಿಚಾರದಲ್ಲಿ ಕೋವಿದರಿರ ಬಹುದು. ನನ್ನ ಗೆಳತಿ ಶ್ರೀಮತಿ ನಾಗರತ್ನ ಅತ್ತಿಮನೆ , ಸಹೋದರ ಸಚ್ಚಿದಾನಂದ ಬೆಲ್ಪತ್ರೆಯವರ ತಂದೆ ,ಇನ್ನೂ ಹಲವರು ಈ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವ ರೀತಿ – ಪಡೆದಿರುವ ಫಲ ಶ್ಲಾಘನೀಯ. ಅಹಾರ ಕೃಷಿ ಎನ್ನುವ ವಿದ್ಯೆಯಲ್ಲಿ ಪರಿಣಿತರಾಗ ಬೇಕಾದರೆ ಯಾವ ವಿಶ್ವ ವಿದ್ಯಾನಿಲಯವೂ ಬೇಡ. ಅನುಭವವೇ ಪಾಠ , ಆಸಕ್ತಿಯೇ ರಸದೂಟ.
ಸಾವಯವ ತರಕಾರಿ ಜೀವನಕೆ ಸಹಕಾರಿ
ನೇವರಿಸಿ ನೋಡದೇ ಸೇವಿಸಿರಿ ಸತತ |
ಶೋಭಾ ಹರಿಪ್ರಸಾದ ಶೆಟ್ಟಿಗಾರ ಉಡುಪಿ