ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಾರಕೂರು

Share with your family and friends

Loading

ಆಳೂಪರು, ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ರಾಜಧಾನಿಯಾಗಿದ್ದ ಬಾರಕೂರಿನಲ್ಲಿ 365 ದೇವಸ್ಥಾನಗಳಿದ್ದು ದಿನಕ್ಕೊಂದು ದೇವಸ್ಥಾನದಂತೆ ವರ್ಷವಿಡೀ ಉತ್ಸವ ನಡೆಯುತ್ತಿತೆಂದು ಹೇಳಲಾಗಿದ್ದು ಅವುಗಳಲ್ಲಿ ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಒಂದಾಗಿದೆ. ಕರಾವಳಿಯಲ್ಲಿ ಹಲವಾರು ಶ್ರೀ ವೀರಭದ್ರ ದೇವಸ್ಥಾನಗಳಿದ್ದು ಪದ್ಮಶಾಲಿ ಸಮುದಾಯದ ಆರಾಧನೆ ಹಾಗೂ ಆಡಳಿತಕ್ಕೆ ಒಳಪಟ್ಟ 16 ಶ್ರೀ ವೀರಭದ್ರ ದೇವಸ್ಥಾನಗಳಲ್ಲಿ ವೀರಗಲ್ಲು ಮತ್ತು ಶಿಲಾಶಾಸನವಿರುವ ಏಕೈಕ ದೇವಸ್ಥಾನವಿದು. ಪದ್ಮಶಾಲಿಗರ ಈ ಮೂಲ ಕ್ಷೇತ್ರದ ಜೀರ್ಣೋದ್ಧಾರದ ಉತ್ಖನನದಲ್ಲಿ ದೊರೆತ ಷಡಾಧಾರವು ಕರ್ನಾಟಕದಲ್ಲೇ ಅತಿ ಪ್ರಾಚೀನವಾಗಿದ್ದು ಆಗಮ ಶಾಸ್ತ್ರಕ್ಕೆ ದೃಢವಾದ ಆಧಾರ ಒದಗಿಸಿದೆ ಮಾತ್ರವಲ್ಲದೆ ಈ ದೇವಳದ ಐತಿಹಾಸಿಕ ಮಹತ್ವವನ್ನು ಹೆಚ್ಚಿಸಿದೆ.

ಇಲ್ಲಿರುವ ದಾನಶಾಸನದಲ್ಲಿ “ಹೊಯ್ಸಳ ವಂಶದ ರಾಜ ಪ್ರತಾಪಚಕ್ರವರ್ತಿ ವೀರಬಲ್ಲಾಳ ದೇವನು ಶಕ 1255 (ಕ್ರಿ.ಶ 1333) ಶ್ರೀಮುಖ ಸಂವತ್ಸರದ ಮಾಘ ಬಹುಳ ಪಂಚಮಿ ಗುರುವಾರದ ದಿನ ಪಟ್ಟದ ಪಿರಿಯರಸಿ ಚಿಕ್ಕಾಯಿ ತಾಯಿಯ ಸಮ್ಮುಖದಲ್ಲಿ ಮಹಾಪ್ರಧಾನ ನೈಜಪ ದಣ್ಣಾಯಕ ಆಜಮ್ನಸಾಹಿನಿ ಮತ್ತಿನ್ನಿತರರು ವೀರೇಶ್ವರ ದೇವಾಲಯಕ್ಕೆ ಬಿಟ್ಟ ಉಂಬಳಿ” ಎಂದಿದೆ. ನಂತರ ವಾರಂಬಳ್ಳಿ/ಸಾಲಿಕೇರಿಯಲ್ಲಿನ ಈ ಉಂಬಳಿ ಜಮೀನನ್ನು ಸ್ವಸಮಾಜದವರಿಗೆ ನೀಡಿ ನೈವೇದ್ಯದ ಅಕ್ಕಿ, ದೀಪದ ಎಣ್ಣೆ ಮೊದಲಾದವುಗಳನ್ನು ಒದಗಿಸಬೇಕೆಂಬ ಶರತ್ತು ವಿಧಿಸಲಾಗಿತ್ತು. ಬದಲಾದ ಕಾನೂನಿನಿಂದಾಗಿ ದೇವಳದ ಸಾಕಷ್ಟು ಭೂಮಿ ಪರಭಾರೆಯಾಯಿತು. ಪ್ರಸ್ತುತ 13 ಸೆಂಟ್ಸ್ ಸ್ಥಳವಿದ್ದು, ಅದೂ ಸರ್ಕಾರದ ಹೆಸರಲ್ಲಿದೆ. 2005ರಲ್ಲಿ ದೇವಳದ ಜೀರ್ಣೋದ್ಧಾರವಾದ ಮೇಲೆ ಸಮೀಪದ 75 ಸೆಂಟ್ಸ್ ಸ್ಥಳ ಖರೀದಿಸಿ ಅಭಿವೃದ್ಧಿಯ ಚಿಂತನೆ ನಡೆಸಲಾಗುತ್ತಿದೆ.

ಕರಾವಳಿಯಲ್ಲಿ ಜನರಿಗೆ ಬೇಕಾದ ಬಟ್ಟೆಯನ್ನು ತಯಾರಿಸಲು ನೇಕಾರರನ್ನು ಕರೆಸಿಕೊಳ್ಳುವುದರ ಮೂಲಕ ಪದ್ಮಶಾಲಿಗರು ಬಾರಕೂರಿಗೆ ಬಂದರೆನ್ನುವುದು ಮೌಖಿಕಪರಂಪರೆಯಿಂದ ಮತ್ತು ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದವರು ನಡೆಸಿದ ಅಷ್ಟಮಂಗಳ ಪ್ರಶ್ನೆಯಿಂದ ತಿಳಿದುಬಂದಿದೆ. ಕಂಚಿಯ ಸಮೀಪ ಶೆಟ್ಟಿಗಾರರ ಮೂಲವನ್ನು ಶೋಧಿಸಿದ್ದು ಅಲ್ಲಿ ಶೆಟ್ಟಿಗಾರರೆಂದು ಕರೆಯಲ್ಪಡುವ ಪದ್ಮಶಾಲಿಗರು ಈಗಲೂ ತಿಳಿದುಬಂದಿದೆ. ಕಂಚಿಯ ಸಮೀಪ ಶೆಟ್ಟಿಗಾರರ ಮೂಲವನ್ನು ಶೋಧಿಸಿದ್ದು ಅಲ್ಲಿ ಶೆಟ್ಟಿಗಾರರೆಂದು ಕರೆಯಲ್ಪಡುವ ಪದ್ಮಶಾಲಿಗರು ಈಗಲೂ ಇದ್ದಾರೆನ್ನುವುದು ಖಚಿತಗೊಂಡಿದೆ. ಹೀಗೆ ಬಾರಕೂರಿಗೆ ಬಂದ ನಮ್ಮ ಪೂರ್ವಜರಿಗೆ ರಾಜ ತಾನು ಆರಾಧಿಸುತ್ತಿದ್ದ ಬ್ರಹ್ಮಲಿಂಗೇಶ್ವರ ದೇವಾಲಯವನ್ನು ನೀಡಿದನು. ನಮ್ಮ ಸಮಾಜದಲ್ಲಿ ದಕ್ಷಯಜ್ಞದಂತಹ ಘಟನೆ ನಡೆದು, ಬ್ರಹ್ಮಲಿಂಗೇಶ್ವರನು ವೀರಭದ್ರ ರೂಪದಲ್ಲಿ ಪ್ರತ್ಯಕ್ಷನಾಗಿ ಅನುಗ್ರಹಿಸಿದನೆಂದೂ, ನಂತರ ಬ್ರಹ್ಮಲಿಂಗೇಶ್ವರ ಲಿಂಗವನ್ನು ಜಲಾಧಿವಾಸಮಾಡಿ ಶ್ರೀ ವೀರಭದ್ರನನ್ನು ಪ್ರತಿμÁ್ಠಪಿಸಿ, ಶ್ರೀ ಬ್ರಹ್ಮಲಿಂಗವೀರಭದ್ರನೆಂದು ಪೂಜಿಸಲಾಯಿತೆಂದು ತಿಳಿದುಬಂದಿದೆ. ಇಲ್ಲಿನ ಅನೇಕ ಶಾಸನಗಳಲ್ಲಿ ಶೆಟ್ಟಿಕಾ(ಗಾ)ರರ ಉಲ್ಲೇಖವಿದ್ದು, ದಕ್ಷಯಜ್ಞದಂತಹ ಘಟನೆ ನಡೆದುದಕ್ಕೆ ಅಧಾರಗಳವೆ.

ಇಲ್ಲಿ ಶ್ರದ್ಧಾಭಕ್ತಿಯಿಂದ ಸೇವೆ ಸಲ್ಲಿಸುತ್ತಿರುವ ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿ, ಮಹಿಳಾ ವೇದಿಕೆ, ಸಂಘಟನಾ ಸಮಿತಿಗಳಿದ್ದು, ಚಿಂತನಾಪೂರ್ವಕ ಕಾರ್ಯಗಳನ್ನು ನೆರವೇರಿಸುತ್ತಿದ್ದರೆನ್ನುವುದಕ್ಕೊಂದು ಉದಾಹರಣೆ ಎಲ್ಲೂ ಕಾಣದ ದಾನಿಗಳ ದಾಖಲೆ ಪಟ್ಟಿ! ದಾನಮಾಡುವ ಪುಣ್ಯಕ್ಕೆ ನಮ್ಮ ಪೂರ್ವಜರೂ ಕಾರಣೀಭೂತರು, ಹಾಗಾಗಿ ದಾನಿಗಳ ಹೆಸರಿನ ಜೊತೆಗೆ ಅವರ ತಂದೆ-ತಾಯಿ, ಅಜ್ಜ-ಅಜ್ಜಿಯರ ಹೆಸರನ್ನೂ ದಾಖಲಿಸಿದ ಅಪೂರ್ವ ಕಾರ್ಯ ನಡೆದಿದೆ. ಈ ದಾನಿಗಳಲ್ಲಿ ಕೆಲವರು ಮರಿಮಕ್ಕಳನ್ನು ಕಂಡಿದ್ದು, ಆ ಮರಿಮಕ್ಕಳಿಗೆ ತಮ್ಮ ಆರು ತಲೆಮಾರಿನವರ ಹೆಸರು ತಿಳಿಯಲು ಇದರಿಂದ ಸಾಧ್ಯವಾಗಿದೆ. ಅಲ್ಲದೆ ಮುಂದಿನ ಪೀಳಿಗೆಯವರಿಗೆ ದೇವತಾ ಕಾರ್ಯಗಳನ್ನು ನೆರವೇರಿಸಿ ತಮ್ಮ ಹೆಸರನ್ನು ಈ ದೇವಳದಲ್ಲಿ ದಾಖಲಿಸಲು ಇದು ಪ್ರೇರಣೆಯಾಗಿದೆ. ಇಂತಹ ಪ್ರಯೋಗವನ್ನು ಪ್ರಾಚೀನ ಕಾಲದಲ್ಲಿ ರಾಜರು, ಶಿಲಾ/ತಾಮ್ರ ಶಾಸನಗಳಲ್ಲಿ, ತಮ್ಮ ಹೆಸರಿನೊಂದಿಗೆ ಹಲವು ತಲೆಮಾರಿನ ಪೂರ್ವಜರ ಹೆಸರನ್ನು ದಾಖಲಿಸುವ ಮೂಲಕ ಅವರೆಲ್ಲರನ್ನು ನೆನಪಿಸಿ ಗೌರವಿಸುವ ಪರಂಪರೆಯನ್ನು ಪ್ರಾರಂಭಿಸಿದ್ದು, ನಾವು ಅದನ್ನು ಮುಂದುವರಿಸಿದ್ದೇವೆನ್ನುವ ಸಂತೃಪ್ತಿ ನಮಗೆ. ಜೊತೆಗೆ ಕಾಲಕಾಲಕ್ಕೆ ದಾನದ ಮೌಲ್ಯ ನಿರ್ಧರಿಸಲು ಅನುವಾಗುವಂತೆ, ಅಂದಿನ ಚಿನ್ನದ ದರವನ್ನೂ ದಾಖಲಿಸಿದೆ!

ಈ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಲಿಂಗವೀರಭದ್ರ, ಶ್ರೀ ದುರ್ಗಾಪರಮೇಶ್ವರಿ, ಶ್ರೀ ಮಹಾಗಣಪತಿ, ನಾಗದೇವರು, ನಂದಿಕೇಶ್ವರ, ಕ್ಷೇತ್ರಪಾಲ, ರಕ್ತೇಶ್ವರಿ, ಮಹಾಕಾಳಿ, ಬೊಬ್ಬರ್ಯ, ಸಪ್ತಮಾತ್ರಿಕೆಯರು, ಕುಮಾರ, ಪಂಜುರ್ಲಿ, ಮುಕ್ಕಾಲ್‍ಪಂಜುರ್ಲಿ, ಕಲ್ಕುಡ, ಅಬ್ಬಗ, ದಾರಗ, ಹಾೈಗುಳಿ, ಮಲಸಾವರಿ, ಗುರುಪೀಠ ಮೊದಲಾದ ಕಾರಣಿಕದಿಂದ ಕೂಡಿದ ದೈವ ದೇವರುಗಳಿದ್ದು, 2004ರಲ್ಲಿ ನಡೆದ ಪವಾಡಕ್ಕೆ ಅನೇಕರು ಸಾಕ್ಷಿಯಾಗಿದ್ದಾರೆ! ಅಶರೀರವಾಣಿ ಮೊದಲಾದ ಕಾರಣಿಕಗಳು ಈಗಲೂ ಕೂಡ ಭಕ್ತರಿಗೆ ಗೋಚರವಾಗುತ್ತಿದೆ. ದೇವಳದಲ್ಲಿ ತ್ರಿಕಾಲ ಪೂಜೆಯಿದ್ದು, ಸಂಕ್ರಾಂತಿಯಂದು ಪರಿವಾರದ ದೈವಗಳ ಪೂಜೆ, ಪೆಬ್ರವರಿ ತಿಂಗಳಲ್ಲಿ ಡೆಕ್ಕೆಬಲಿ-ಗೆಂಡಸೇವೆಯೊಂದಿಗೆ ವಾರ್ಷಿಕ ಉತ್ಸವ, ಗಣಹೋಮ, ಶ್ರಾವಣ ಸೋಣೆಯಾರತಿ, ಚೌತಿ, ಪಂಚಮಿ, ನವರಾತ್ರಿ ಮೊದಲಾದ ಪರ್ವಕಾಲದ ವಿಶೇಷ ಪೂಜೆ ಮತ್ತು ಪಟ್ಟೆ ಸೇವೆ, ತುಲಾಬಾರ, ಚಂಡಿಕಾ ಹೋಮ, ದುರ್ಗಾಹೋಮ, ರುದ್ರಾಭಿಶೇಕ ಮೊದಲಾದ ಹರಕೆ ಸೇವೆಗಳೂ ನಡೆಯುತ್ತವೆ. ಈ ದೇವಳದ ಬಹುತೇಕ ಸದಸ್ಯರು ದೇವಸ್ಥಾನದಿಂದ ಅನತಿ ದೂರದಲ್ಲಿದ್ದು ಆಗಾಗ್ಗೆ ಕ್ಷೇತ್ರಕ್ಕೆ ಭೇಟಿ ನೀಡಿ, ದೇವಳದ ಪ್ರಗತಿ ಬಗ್ಗೆ ಚಿಂತಿಸಲು ಅನುಕೂಲವಿದೆ. ಜೀರ್ಣೋದ್ಧಾರದ ನಂತರ ಪ್ರತಿ ತಿಂಗಳ ಮೊದಲ ಭಾನುವಾರ ಶ್ರೀ ಸತ್ಯನಾರಾಯಣ ಪೂಜೆ-ಅನ್ನಸಂತರ್ಪಣೆ ನಡೆಸಲಾಗುತ್ತಿದೆ. ಈ ಪೂಜೆಯು ನಿರಂತರವಾಗಿ ನಡೆದು 200 ತಿಂಗಳು ಪೂರೈಸುವ ಹಂತಕ್ಕೆ ಬಂದಿದ್ದು 4ನೇಯ ಉದ್ಯಾಪನೆಯನ್ನು ಪೂರೈಸಿ 5ನೆಯ ಉದ್ಯಾಪನೆಯತ್ತ ಮುನ್ನಡೆಯುತ್ತಿದೆ. ಈ ಸೇವೆಯನ್ನು ತಿಂಗಳಿಗೊಬ್ಬರಂತೆ ಭಕ್ತರು ನಡೆಸಿಕೊಡುತ್ತಿದ್ದು, ಅವರಲ್ಲಿ ನಮ್ಮ ಸಮಾಜದ ಇತರ ದೇವಸ್ಥಾನಗಳ ಭಕ್ತ ಕುಟುಂಬದವರೂ ಇದ್ದಾರೆನ್ನುವುದು ಬಹಳ ಸಂತೋಷದ ವಿಷಯ. ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಮುಂಚಿತವಾಗಿ ತಿಳಿಸಿದಲ್ಲಿ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ. ಇದು ಕರಾವಳಿ ಪದ್ಮಶಾಲಿಗರ ಮೂಲಸ್ಥಾನವಾಗಿದ್ದರಿಂದ ಇತ್ತೀಚಿನ ದಿನಗಳಲ್ಲಿ ಇತರ 15 ದೇವಸ್ಥಾನಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿ ಪೂಜೆ, ಪ್ರಾರ್ಥನೆ ಮತ್ತು ಹರಕೆ ಸಲ್ಲಿಸುತ್ತಿದ್ದು, ಸಮಸ್ತ ಭಕ್ತರಿಗೆ ಕುಲದೇವರು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇವೆ.