ಪದ್ಮಶಾಲಿಗರ/ಶೆಟ್ಟಿಗಾರರ ಪ್ರಾತಿನಿಧಿಕ ಸಂಸ್ಥೆಯಾದ ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾವು ಎಪ್ಪತ್ತೈದು ವರ್ಷಗಳ ಸಾರ್ಥಕ ಸಮಾಜ ಸೇವೆಯನ್ನು ಪೂರೈಸಿದೆ. ನದಿಯಲ್ಲಿ ಶುದ್ಧಜಲವು ಕ್ಷಣಕ್ಷಣಕ್ಕೆ ಹರಿಯುತ್ತಾ ಸಾಗುವಂತೆ ಸಂಸ್ಥೆಯ ಮುನ್ನಡೆಯಲ್ಲಿ ಕಾಲಕಾಲಕ್ಕೆ ನವ ಮುತ್ಸದ್ದಿಗಳು ಸೇವೆಸಲ್ಲಿಸಿದ್ದಾರೆ. ಅವರೆಲ್ಲರನ್ನು ಈ ಪರ್ವಕಾಲದಲ್ಲಿ ಸ್ಮರಿಸುತ್ತ ನಡೆದು ಬಂದ ದಾರಿಯ ಸ್ಥೂಲಾವಲೋಕನದ ಸಾರವನ್ನು ಸಂಗ್ರಹಿಸಿನೀಡುತ್ತಿದ್ದೇನೆ.
ಇತ್ತೀಚಿಗೆ ನಡೆದ ಸಂಶೋಧನೆ ಮತ್ತು ಅಷ್ಟಮಂಗಳ ಪ್ರಶ್ನೆಯ ಆಧಾರದಲ್ಲಿ ಶೆಟ್ಟಿಗಾರರು ಆಂಧ್ರಪ್ರದೇಶದ ಅಮರಾವತಿಯ ಮೂಲದವರೆಂದೂ ಆ ಕಾಲದ ಆಚಾರ್ಯಶಾಪ ಇತ್ಯಾದಿ ಕಾರಣಗಳಿಂದ ಊರು ಬಿಡಬೇಕಾದ ಪರಿಸ್ಥಿತಿಯಲ್ಲಿ ತಮಿಳುನಾಡಿನ ಕಾಂಚಿಗೆ ಸ್ಥಳಾಂತರಗೊಂಡು ಕ್ರಮೇಣ ಮಧುರೆಗೆ ಬಂದು ಅಲ್ಲಿ ಭದ್ರವಾದ ಜೀವನವನ್ನು ಕಾಣದೆ ಕರ್ನಾಟಕದ ಕರಾವಳಿಗೆ ವಲಸೆ ಬಂದು ಕೇರಳದ ಹೊಸದುರ್ಗದಿಂದ ಉಡುಪಿಯ ಬಾರ್ಕೂರಿನ ವರೆಗೆ ಆಶ್ರಯವನ್ನು ಕಂಡುಕೊಂಡರೆಂಬುದು ಇತಿಹಾಸ.
ಆರಂಭಿಕ ಹಂತ :
ಜೀವನೋಪಾಯವನ್ನು ಅರಸಿ ಕರಾವಳಿಯ ಭಾಗದಲ್ಲಿ ನೆಲೆಸಿದ ಸಮಾಜಕ್ಕೆ ಬಹುಕಾಲದ ವರೆಗೆ ಸಂಘಟನೆಯನ್ನು ಸ್ಥಾಪಿಸುವ ಶಕ್ತಿ ಇರಲಿಲ್ಲ. ಅಲ್ಲದೆ ತನ್ನಿಮಿತ್ತವಾದ ಯುಕ್ತಿಯೂ ಹೊಳೆದಿರಲಿಲ್ಲ. 1932ನೆಯ ಇಸವಿಯಲ್ಲಿ ಪ್ರಜ್ಞಾವಂತರಾದ ಕಾರ್ಕಳದ ಕೀರ್ತಿಶೇಷ ಬ್ರಹ್ಮಾನಂದರವರು ಸಂಗಡಿಗರಾದ ಮುತ್ತಯ್ಯ ಶೆಟ್ಟಿಗಾರ್, ಸುಬ್ಬಯ್ಯ ಶೆಟ್ಟಿಗಾರ್ ಮತ್ತು ಧರ್ಮಾನಂದ ಶೆಟ್ಟಿಗಾರರವರ ಸಹಕಾರದಿಂದ ಪದ್ಮಶಾಲಿ ಯಾನೆ ಶೆಟ್ಟಿಗಾರ ವೈಶ್ಯ ಸಮಾಜಸೇವಾ ಸಂಘವನ್ನು ಸ್ಥಾಪಿಸಿದರು. ಅವಿಭಜತ ದಕ್ಷಿಣ ಕನ್ನಡ ಜಿಲ್ಲೆಯ 17 ಕೇಂದ್ರಗಳಲ್ಲಿ ಈ ಸಂಸ್ಥೆಯನ್ನು ವ್ಯಾಪಿಸಿ ಸಮಾಜಬಂಧುಗಳನ್ನು ಒಟ್ಟುಗೂಡುವಂತೆ ಮಾಡಿದ ಕೀರ್ತಿ ಬ್ರಹ್ಮಾನಂದರಿಗೆ ಮತ್ತು ಸಂಗಡಿಗರಿಗೆ ಸಲ್ಲುತ್ತದೆ. ಮುಂದೆ ಸಾವಿರದ ಒಂಭೈನೂರ ನಲ್ವತ್ತಾರನೆಯ ಇಸವಿಯಲ್ಲಿ ಈ ಸಂಘವೇ ದ.ಕ. ಜಿಲ್ಲಾ ಪದ್ಮಶಾಲಿ ಸಮಾಜಸೇವಾ ಸಂಘವೆಂಬ ಹೆಸರಿನಿಂದ ಅಧಿಕೃತವಾಗಿ ನೋಂದಾವಣೆಗೊಂಡಿರುತ್ತದೆ. ಮುಂದೆ ಸಾವಿರದ ಒಂಭೈನೂರ ಎಪ್ಪತ್ತ ಮೂರನೆಯ ಇಸವಿಯಲ್ಲಿ `ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ’ ಎಂಬ ಹೆಸರು ಪಡೆದು ಕಾರ್ಯಾಚರಿಸುತ್ತಿದೆ.
ಆರಂಭದ ಸಮಾಜಪರವಾದ ಕಾರ್ಯಗಳು :
ಸಮಾಜದ ಮುಖ್ಯ ಉದ್ಯೋಗವಾದ ನೇಕಾರಿಕೆಯ ಸಮಸ್ಯೆಗಳನ್ನು ಬಗೆಹರಿಸುವುದು ಸಂಸ್ಥೆಯ ಮುಂದಿದ್ದ ಆರಂಭದ ಸವಾಲು. 1950ನೆಯ ಇಸವಿಯಲ್ಲಿ ಅಖಿಲಭಾರತ ನೇಕಾರ ಕಾಂಗ್ರೆಸ್ ಏರ್ಪಡಿಸಿದ ಮಹಾಧಿವೇಶನಕ್ಕೆ ಮನವಿಯನ್ನು ಸಲ್ಲಿಸಿ ನೇಕಾರರಿಗೆ ನೂಲು ಸಿಗುವಂತೆ ಮಾಡಲು ಪ್ರಯತ್ನ ಮಾಡಲಾಗಿದೆ. ಅಲ್ಲದೆ ಜಿಲ್ಲೆಯಾದ್ಯಂತ ಎಲ್ಲ ತಾಲೂಕು ಕೇಂದ್ರಗಳಲ್ಲಿ ರಚಿಸಲಾದ ನೂಲು ಸಲಹೆ ಸಮಿತಿಯಲ್ಲಿ ಸಂಘಕ್ಕೆ ಪ್ರಾತಿನಿಧ್ಯ ದೊರಕಿಸಲು ಪ್ರಯತ್ನ ಮಾಡಲಾಯಿತು. 1958ನೆಯ ಇಸವಿಯಲ್ಲಿ ಸಮಾಜವನ್ನು ಮುಂದುವರಿದ ವರ್ಗಗಳ ಸಾಲಿಗೆ ಸೇರಿಸಿದ ಪ್ರಸ್ತಾಪವನ್ನು ವಿರೋಧಿಸಲಾಯಿತು. 1960ನೆಯ ಇಸವಿಯಲ್ಲಿ ನೇಕಾರ ಸಮ್ಮೇಳನವನ್ನು ಕರೆದು ನೇಕಾರರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಯಿತು. 1962ನೆಯ ಇಸವಿಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಕ್ಕೆ ಸಮಾಜದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲ್ಪಟ್ಟಾಗ ಸರಕಾರದೊಂದಿಗೆ ಸೂಕ್ತವಾಗಿ ವ್ಯವಹರಿಸಿ ಪ್ರವೇಶ ಪಡೆಯುವಂತೆ ಮಾಡಲಾಗಿದೆ.
ರಜತಮಹೋತ್ಸವ :
ದಿನಾಂಕ 21-05-1973 ಮತ್ತು 22-05-1973ರ ಎರಡು ದಿನಗಳಲ್ಲಿ ರಜತಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಮಾಜದ ಹದಿನಾರು ಶ್ರದ್ಧಾಕೇಂದ್ರಗಳ ಪ್ರತಿನಿಧಿಗಳ ಸಮಾವೇಶವನ್ನು ಏರ್ಪಡಿಸಿ ದೇವಸ್ಥಾನ ಮತ್ತು ಮಹಾಸಭಾ ನಡುವೆ ನಿಕಟ ಸಂಬಂಧವನ್ನು ಸಾಧಿಸಲಾಯಿತು. ಸಮಾಜದ ಪಿಡುಗುಗಳನ್ನು ನಿವಾರಿಸುವ ದೃಷ್ಟಿಯಿಂದಲೂ ರೀತಿನೀತಿಗಳಲ್ಲಿ ಏಕತೆಯನ್ನು ಸಾಧಿಸುವ ಸಲುವಾಗಿಯೂ ಹತ್ತು ಪ್ರಮುಖ ನಿರ್ಣಯಗಳನ್ನು ಈ ಸಂಬಂಧದಲ್ಲಿ ಕೈಗೊಳ್ಳಲಾಯಿತು.ಆಂಧ್ರಪ್ರದೇಶದ ಮಾಜಿ ಮಂತ್ರಿಗಳಾದ ಶ್ರೀ ಕೊಂಡಾಲಕ್ಷಯ್ಯ ಈರಾಬತ್ತಿ ಆಂಧ್ರಪ್ರದೇಶದ ಸಹಕಾರಿ ಸಂಘಗಳ ಅಧ್ಯಕ್ಷರಾದ ಶ್ರೀ ಬಿ. ರಾಮುಲು, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಮತ್ತು ಲೇಖಕರಾದ ದಿ| ಪಿ. ಗುರುರಾಜ ಭಟ್ ಮುಂತಾದ ಗಣ್ಯರಿಂದ ಸಭೆಯ ಶೋಭೆ ವರ್ಧಿಸಿತ್ತು.
ಸುವರ್ಣಮಹೋತ್ಸವ :
ಸುವರ್ಣಮಹೋತ್ಸವವು ಮಹಾಸಭಾದ ಸ್ಮರಣೀಯ ಕಾರ್ಯಕ್ರಮವಾಗಿತ್ತು. ದಿನಾಂಕ 28-12-1996 ಮತ್ತು 29-12-1996 ರ ಎರಡು ದಿನಗಳಲ್ಲಿ ಉತ್ಸವವು ಮಂಗಳೂರಿನ ಸಂಘನಿಕೇತನ ಮತ್ತು ಆದಿಉಡುಪಿಯ ಸುವರ್ಣಮಹೋತ್ಸವ ಭವನದ ಪರಿಸರದಲ್ಲಿ ವೈಭವೋಪೇತವಾಗಿ ಸಂಘಟಿಸಲಾಗಿತ್ತು. ಅಲ್ಲಿಯ ವರೆಗೆ ಮಹಾಸಭಾವು ಸ್ವಂತಕಟ್ಟಡವನ್ನು ಹೊಂದಿರಲಿಲ್ಲ. ಮಂಗಳೂರಿನ ಮೈಸೂರು ಫ್ಯಾಷನ್ ಹೌಸ್ ಹಾಗೂ ಉಡುಪಿಯ ಕೆನರಾ ಟೆಕ್ಸ್ಟೈಲ್ಸ್ ಸಂಸ್ಥೆಗಳಲ್ಲಿ ಕಚೇರಿಕೆಲಸಗಳು ಜರುಗುತ್ತಿದ್ದವು. ಸುವರ್ಣ ಮಹೋತ್ಸವದ ಶುಭಾವಸರದಲ್ಲಿ “ಸುವರ್ಣಮಹೋತ್ಸವಭವನ”ವೆಂಬ ಹೆಸರಿನ ಕಚೇರಿ ಮತ್ತು ಬಾಡಿಗೆ ಆದಾಯವನ್ನು ತರುವ ಅಂಗಡಿ ಕೋಣೆಗಳನ್ನು ನಿರ್ಮಿಸಲಾಗಿ ಮಹಾಸಭಾಕ್ಕೆ ಸ್ವಂತ ನೆಲೆ ದೊರಕಿದಂತಾಯಿತು.
ವಿದ್ಯಾವರ್ಧಕ ಸಂಘದ ಸ್ಥಾಪನೆ :
ವಿದ್ಯಾಭ್ಯಾಸದ ಮುನ್ನಡೆಯು ಸಮಾಜದ ಅಭಿವೃದ್ಧಿಯ ಹೇತುವೆಂದು ನಂಬಲಾಗಿ 1990 ನೆಯ ಇಸವಿಯಲ್ಲಿ ಪ್ರತ್ಯೇಕವಾಗಿ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಲಾಯಿತು. ಪ್ರಕೃತ ವಿದ್ಯಾವರ್ಧಕ ಸಂಘವು ಉಚಿತ ವಿದ್ಯಾರ್ಥಿವೇತನ ವಿತರಣೆ, ಸಾಲರೂಪದ ವಿದ್ಯಾರ್ಥಿವೇತನಪ್ರದಾನ, ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವುದು ಹಾಗೂ ಪ್ರತಿಭಾ ಪುರಸ್ಕಾರ ಇತ್ಯಾದಿಗಳನ್ನು ನಡೆಸಿಕೊಂಡು ಸಮಾಜದ ಶೈಕ್ಷಣಿಕ ಮತ್ತು ಬೌದ್ಧಿಕ ಬೆಳವಣಿಗೆಗಾಗಿ ಕಾರ್ಯಾಚರಿಸುತ್ತಿದೆ.
ನೇಕಾರ ಸಮ್ಮೇಳನ :
ಕ್ಷೀಣಿಸುತ್ತಿರುವ ಕೈಮಗ್ಗ ವೃತ್ತಿಯನ್ನು ಉಳಿಸಿಕೊಂಡು ಆಧುನಿಕತೆಗೆ ಒಗ್ಗಿಕೊಳ್ಳುವ ವಿದ್ಯುತ್ಮಗ್ಗವನ್ನು ಬೆಳೆಸುವ ಸಲುವಾಗಿ ದಿನಾಂಕ 30-01-1994 ರಂದು ಮಂಗಳೂರಿನಲ್ಲಿ ನೇಕಾರ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಮಂತ್ರಿಗಳು, ಜವಳಿ ಇಲಾಖೆ ಅಧಿಕಾರಿಗಳು ಹಾಗೂ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದು ನೇಕಾರರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಿದ್ದರು.
ವಜ್ರ ಮಹೋತ್ಸವ ಆಚರಣೆ :
ಮಹಾಸಭಾದ ಷಷ್ಟ್ಯಬ್ದಿ ಕಾರ್ಯಕ್ರಮವನ್ನು ದಿನಾಂಕ 01-12-2007 ರಂದು ಮಂಗಳೂರಿನ ಪಾಲ್ಕೆ ಕೃμÁ್ಣಚಾರ್ ಹಾಲ್ನಲ್ಲಿ ದಿನಾಂಕ 02-12-2007 ರಂದು ಶ್ರೀ ವೀರಭದ್ರ ಕಲಾಭವನ ಕಿನ್ನಿಮುಲ್ಕಿಯಲ್ಲೂ ಜರಗಿಸಲಾಗಿರುತ್ತದೆ. ಈ ಶುಭಾವಸರದಲ್ಲಿ ಮಹಾಸಭಾದ ಹಿಂದಿನ ಸಾಧಕರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘಕ್ಕೆ ನಿಟ್ಟೆಯಲ್ಲಿ ಶ್ರೀ ರಾಮಕೃಷ್ಣ ವಿದ್ಯಾರ್ಥಿ ನಿಲಯವನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲಾಯಿತು. ಈ ಯೋಜನೆಯನ್ನು ಕಾರ್ಯಗತಗೊಳಿಸಿ ದಿನಾಂಕ 07-06-2019ರಂದು ಉದ್ಘಾಟನೆ ಮಾಡಲಾಯಿತು. ಕೆಲಕಾಲ ಈ ವಿದ್ಯಾರ್ಥಿನಿಲಯವು ಕಾರ್ಯಾಚರಿಸಿತಾದರೂ ಪ್ರಸ್ತುತ ಅನ್ಯಾನ್ಯ ಕಾರಣಗಳಿಂದ ಸ್ತಬ್ದವಾಗಿರುವುದು ಹಿನ್ನಡೆಯ ಅಂಶ. ಈ ಬಗ್ಗೆ ಚಿಂತನಮಂಥನಗಳು ಈಗಲೂ ನಡೆಯುತ್ತಿದೆ.
ಏಕರೂಪ ವಿವಾಹ ವಿಧಿ ಕೈಪಿಡಿ :
ಸಮಾಜದಲ್ಲಿ ನಡೆಯುವ ವಿವಾಹವಿಧಿಗಳು ವಿಭಿನ್ನವಾಗಿರುವುದರಿಂದ ಒಂದೇ ರೀತಿಯ ವಿವಾಹವಿಧಿಗಳನ್ನು ಅನುμÁ್ಠನಕ್ಕೆ ತರುವ ಉದ್ದೇಶದಿಂದ 16 ದೇವಸ್ಥಾನಗಳ ಪ್ರಮುಖರ ಸಭೆಯನ್ನು ದಿನಾಂಕ 18-04-2010 ರಂದು ಬಾರ್ಕೂರಿನ ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಮೂಡಿಬಂದ ಅಭಿಪ್ರಾಯವನ್ನನುಸರಿಸಿ ತಜ್ಞರ ಸಮಿತಿಯನ್ನು ರಚಿಸಿ ಏಕರೂಪ ವಿವಾಹ ವಿಧಿ ಕೈಪಿಡಿಯನ್ನು ದಿನಾಂಕ 17.07.2011ರಲ್ಲಿ ಬಿಡುಗಡೆ ಮಾಡಲಾಯಿತು. ವಿವಾಹದ ಎಲ್ಲ ವಿಧಿಗಳನ್ನು ಸಚಿತ್ರವಾಗಿ ಕೈಪಿಡಿಯಲ್ಲಿ ವಿವರಿಸಲಾಗಿದ್ದು ಶಾಸ್ತ್ರವಿಧಿಯಂತೆ ವಿವಾಹ ಮಾಡಲಿಚ್ಚಿಸುವ ಸಮಾಜ ಬಂಧುಗಳಿಗೆ ಉಪಯುಕ್ತವಾಗಿರುತ್ತದೆ.
ಹದಿನಾರು ದೇವಸ್ಥಾನಗಳ ಧಾರ್ಮಿಕ ಸಭೆ :
ಸಮಾಜದಲ್ಲಿ ಚಾಲ್ತಿಯಲ್ಲಿರುವ ಪೂಜಾಪದ್ಧತಿಗಳು ಹಾಗೂ ಆಚರಣೆಗಳು ಎಲ್ಲ ದೇವಸ್ಥಾನಗಳಲ್ಲಿ ಒಂದೇ ರೀತಿಯಲ್ಲಿ ಇರುವುದಿಲ್ಲ. ಅಲ್ಲದೆ ನಮ್ಮ ಕುಲದ ಮೂಲದ ವಿಚಾರದಲ್ಲಿ ಏಕಾಭಿಪ್ರಾಯ ವಿರುವುದಿಲ್ಲವೆಂಬ ಅಂಶವನ್ನು ಪರಿಗಣಿಸಿ ಒಮ್ಮತದ ಅಭಿಪ್ರಾಯ ಮೂಡಿಸುವ ಸಲುವಾಗಿ ಮಂಗಳೂರಿನ ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನದಲ್ಲಿ ಹದಿನಾರು ದೇವಸ್ಥಾನಗಳ ಪ್ರಮುಖರ ಧಾರ್ಮಿಕ ಸಭೆಯನ್ನು ದಿನಾಂಕ 20-05-2012 ರಂದು ಏರ್ಪಡಿಸಲಾಯಿತು ಈ ಸಭೆಯಲ್ಲಿ ಮೂಡಿಬಂದ ಅಭಿಪ್ರಾಯವನ್ನನುಸರಿಸಿ ಮುಂದೆ ಕುಲದ ಮೂಲವನ್ನು ಶೋಧನೆ ಮಾಡಿ ನಮ್ಮ ಮೂಲಸ್ಥಾನವು ಆಂಧ್ರಪ್ರದೇಶದ ಅಮರಾವತಿ ಎಂದು ಕಂಡುಕೊಳ್ಳಲಾಗಿದೆ. ಈ ಕುರಿತಾಗಿ ಪ್ರಪ್ರಥಮವಾಗಿ ಅಮರಾವತಿ ಮಧುರೈ ಮತ್ತು ಕಾಂಚಿಯ ಯಾತ್ರೆಯನ್ನು ದಿನಾಂಕ 01-06-2016 ರಿಂದ 08-06-2016ರ ಎಂಟು ದಿನಗಳಲ್ಲಿ ಕೈಗೊಳ್ಳಲಾಗಿರುತ್ತದೆ.
ಶ್ರೀ ಅಂಬಾತನಯ ಮುದ್ರಾಡಿಯವರ ಎಂಬತ್ತರ ಸಂಭ್ರಮ :
ಅದ್ವಿತೀಯ ಸಾಹಿತಿಗಳು ಹಾಗೂ ಸಮಷ್ಟಿ ಸಮಾಜದಲ್ಲಿ ಪ್ರತಿಭಾ ಸಂಪನ್ನರಾಗಿ ಗುರುತಿಸಿಕೊಂಡ ಶ್ರೀ ಅಂಬಾತನಯ ಮುದ್ರಾಡಿಯವರು 80 ವರ್ಷ ಪೂರೈಸಿದ ಸುಸಂದರ್ಭದಲ್ಲಿ ದಿನಾಂಕ 10.08.2014 ರಂದು ಉಡುಪಿಯ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿದೇವಸ್ಥಾನದಲ್ಲಿ ಸಂಭ್ರಮಾಚರಣೆಯನ್ನುಆಚರಿಸಲಾಯಿತು. ನಾಡಿನ ಶ್ರೇಷ್ಠ ವಿದ್ವಾಂಸರಾದ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರೇ ಮೊದಲಾದ ವಿದ್ವಾಂಸರು ಉತ್ಸವದಲ್ಲಿ ಭಾಗವಹಿಸಿದ್ದರು. “ಯಕ್ಷಚಂದ್ರಿಕಾ” ಎಂಬ ಅಂಬಾತನಯರ ಕೃತಿರತ್ನವನ್ನು ಈ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು.
ಕ್ರೀಡೋತ್ಸವಗಳು :
ಯುವಕ ಯುವತಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 1991ನೆಯ ಇಸವಿಯಲ್ಲಿ ಸಿದ್ದಕಟ್ಟೆಯ ಪಣಂಬೂರು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯೀ ದೇವಸ್ಥಾನದ ವಠಾರದಲ್ಲಿ ಕ್ರಿಕೆಟ್ ಕ್ರೀಡೋತ್ಸವವನ್ನು ನಡೆಸಲಾಯಿತು. ಈ ಕ್ರೀಡಾಕೂಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಬಂಧುಗಳು ಸಮಾಹಿತರಾಗಿ ಒಗ್ಗಟ್ಟನ್ನು ಮೆರೆದಿರುತ್ತಾರೆ. ಈ ಸಮಾರಂಭದ ಯಶಸ್ಸು ಮುಂದೆ ಪ್ರತಿ ವರ್ಷ ಕ್ರೀಡೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಪ್ರೇರಣೆ ನೀಡಿತು. ಪ್ರಸ್ತುತ ಮೂವತ್ತನೆಯ ವರ್ಷದ ಪದ್ಮಶಾಲಿ ಕ್ರೀಡೋತ್ಸವವನ್ನು ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನ ಸಾಲಿಕೇರಿಯ ಆತಿಥ್ಯದಲ್ಲಿ ದಿನಾಂಕ 25.12.2022 ರಂದು ವಿಧ್ಯುಕ್ತವಾಗಿ ಜರಗಿಸಲಾಗಿರುತ್ತದೆ.
ಪದ್ಮಶಾಲಿ ಸಾಮಾಜಿಕ ನಾಯಕತ್ವ ಪ್ರಶಸ್ತಿ :
ಕೀರ್ತಿಶೇಷರಾದ ದಯಾನಂದ ಕೊಂಚಾಡಿ ಹಾಗೂ ವಿಮಲಾ ಕೊಂಚಾಡಿ ಬೆಂಗಳೂರು ಇವರಿಂದ ಸುವರ್ಣ ಮಹೋತ್ಸವದ ಸದವಸರದಲ್ಲಿ ನಾಯಕತ್ವವನ್ನು ಬೆಂಬಲಿಸುವುದಕ್ಕಾಗಿ ಪದ್ಮಶಾಲಿ ಸಾಮಾಜಿಕ ನಾಯಕತ್ವ ಪ್ರಶಸ್ತಿಯು ಸ್ಥಾಪಿಸಲ್ಪಟ್ಟಿರುತ್ತದೆ. ಪ್ರಥಮವಾಗಿ ಈ ಪ್ರಶಸ್ತಿಯನ್ನು ಕೀರ್ತಿಶೇಷ ಕೆ. ಬ್ರಹ್ಮಾನಂದರವರಿಗೆ ನೀಡಲಾಗಿರುತ್ತದೆ. ಮಹಾಸಭಾದಲ್ಲಿ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ಸಮಾಜದ ಮುಖಂಡರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಬ್ರಹ್ಮಾನಂದ ಸಂತ್ರಸ್ತ ನಿಧಿ :
ಆರ್ಥಿಕವಾಗಿ ಹಾಗೂ ಅನಾರೋಗ್ಯದಿಂದ ಸಂತ್ರಸ್ತರಾದ ಸಮಾಜ ಬಂಧುಗಳಿಗೆ ಸಕಾಲದಲ್ಲಿ ಸಹಾಯಹಸ್ತ ನೀಡುವ ಸಲುವಾಗಿ ಕೀರ್ತಿಶೇಷ ಬ್ರಹ್ಮಾನಂದರ ಹೆಸರಿನಲ್ಲಿ ದಿನಾಂಕ 10.07.2005 ರಂದು ಬ್ರಹ್ಮಾನಂದ ಸಂತ್ರಸ್ತ ನಿಧಿಯನ್ನು ಸ್ಥಾಪಿಸಲಾಗಿರುತ್ತದೆ. ಅನೇಕ ಸಮಾಜ ಬಂಧುಗಳಿಗೆ ಈ ನಿಧಿಯಿಂದ ಪರಿಹಾರ ನಿಧಿಯನ್ನು ನೀಡಲಾಗಿರುತ್ತದೆ.
ಕರಾವಳಿ ಶೆಟ್ಟಿಗಾರ್ ಸಮಾವೇಶ :
ಕರಾವಳಿಯಾದ್ಯಂತ ನೆಲೆಸಿರುವ ಹದಿನಾರು ದೇವಸ್ಥಾನಗಳ ಸದಸ್ಯ ಬಾಂಧವರನ್ನು ಏಕತ್ರ ಕ್ರೋಢೀಕರಿಸಿ ಏಕತೆಯನ್ನು ಸಾಧಿಸುವ ಉದ್ದೇಶದಿಂದ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ಸಂಕೀರ್ಣದಲ್ಲಿ ಅಪೂರ್ವವಾದ ಕರಾವಳಿ ಶೆÀಟ್ಟಿಗಾರ ಸಮಾವೇಶವನ್ನು ದಿನಾಂಕ 27-08-2016 ಮತ್ತು 28-08-2016ರ ಎರಡು ದಿನಗಳಲ್ಲಿ ಜರಗಿಸಲಾಗಿರುತ್ತದೆ. ಈ ಸಮಾವೇಶದಲ್ಲಿ ಎಲ್ಲ ಸಮಾಜ ಬಾಂಧವರು ತಮ್ಮ ಭಿನ್ನ ಭೇದಗಳನ್ನು ಮರೆತು ಏಕತೆಯ ಮಂತ್ರವನ್ನು ಪಠಿಸಿದ ಸುಮಧುರ ಸನ್ನಿವೇಶದ ಸವಿಯನ್ನು ಅನುಭವಿಸಿದರು. ಸಮಾಜವನ್ನು ಹಿಂದುಳಿದ ವರ್ಗಗಳ 2ಎ ಪಟ್ಟಿಯಲ್ಲಿ ಸೇರಿಸಲು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು. ಸಮಾಜಕ್ಕಾಗಿ ಸಮಾಜ ಭವನವನ್ನು ನಿರ್ಮಿಸಲು ಉಪಯುಕ್ತವಾದ ನಿವೇಶನವನ್ನು ಒದಗಿಸಬೇಕೆಂದೂ ನೇಕಾರರಿಗೆ ಪಿಂಚಣಿ ನೀಡಬೇಕೆಂದೂ ಈ ಸಂದರ್ಭದಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಮಾಜದ ತ್ರೈಮಾಸಿಕ – ಪದ್ಮಪತ್ರ-ಪದ್ಮಲೇಖ
ಸಮಾಜದ ಸುದ್ದಿಗಳನ್ನು ಪ್ರಸಾರ ಮಾಡಿ ಭಾವೈಕ್ಯವನ್ನು ಉಂಟು ಮಾಡುವ ಉದ್ದೇಶದಿಂದ ಸಾಹಿತಿಗಳಾದ ಶ್ರೀ ಅಂಬಾತನಯ ಮುದ್ರಾಡಿಯವರ ಸಂಪಾದಕತ್ವದಲ್ಲಿ ಪ್ರಾಯೋಗಿಕವಾಗಿ ಪದ್ಮಪತ್ರ''ವೆಂಬ ತ್ರೈಮಾಸಿಕ ಪತ್ರಿಕೆಯನ್ನು ದಿನಾಂಕ 20-08-2017 ರಂದು ಉದ್ಘಾಟಿಸಿ ಹೊರತರಲಾಯಿತು. ಸರಕಾರದ ಅಧಿಕೃತ ಮಾನ್ಯತೆ ಪಡೆದ ಬಳಿಕ ಈ ಪತ್ರಿಕೆಗೆ
ಪದ್ಮಲೇಖ” ಎಂಬ ಹೆಸರು ಬಂದಿದೆ. ಪ್ರಕೃತ ಸಮಾಜದ ಮುಖವಾಣಿಯಾಗಿ “ಪದ್ಮಲೇಖ” ಕಾರ್ಯಾಚರಿಸುತ್ತಿದೆ.
ಅಮೃತಮಹೋತ್ಸವ :
ಮಹಾಸಭಾವು ಎಪ್ಪತ್ತೈದು ವರ್ಷಗಳ ಸಮಾಜಸೇವೆಯನ್ನು ಪೂರೈಸಿರುವುದರಿಂದ ಸಕಾಲಿಕವಾಗಿ ಅಮೃತ ಮಹೋತ್ಸವವನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಲ್ಕಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಸುಮಾರು ಹದಿನಾಲ್ಕು ಸಾವಿರ ಬಂಧುಗಳು ಈ ಮಹೋತ್ಸವದಲ್ಲಿ ಭಾಗವಹಿಸಿ ಸಮಾಜದ ಒಗ್ಗಟ್ಟಿಗೆ ಸಾಕ್ಷಿಯಾಗಿದ್ದಾರೆ. ರಾಜ್ಯಸಭಾ ಸದಸ್ಯರೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆದ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟನೆಯಾದ ಈ ಉತ್ಸವವು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಸಮಾಜದ ಉದ್ಯಮಪತಿಗಳನ್ನು ಹಾಗೂ ಸೇವಾವ್ರತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗಿರುತ್ತದೆ. ವಿವಿಧ ಕ್ಷೇತ್ರಗಳ ಸಾಧಕರನ್ನು, ವಿಶ್ರಾಂತಯೋಧರನ್ನು ಮತ್ತು ಆರಕ್ಷಕಬಂಧುಗಳನ್ನು ಈ ಉತ್ಸವಕಾಲದಲ್ಲಿ ಗೌರವಿಸಲಾಗಿರುತ್ತದೆ. ಅನ್ಯಾನ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಈ ಶುಭಾವಸರದಲ್ಲಿ ಸನ್ಮಾನಿಸಿರುವುದಲ್ಲದೆ ತೆರೆಮರೆಯ ಅನೇಕ ಪ್ರತಿಭೆಗಳನ್ನು ಅನಾವರಣ ಮಾಡಲಾಗಿರುತ್ತದೆ. ಮಹಿಳಾ ಸಮಾವೇಶವನ್ನು ಜರಗಿಸಿ ಮಹಿಳೆಯರ ಜಾಗೃತಿಯ ಅಭಿಯಾನವನ್ನು ವಿಶಿಷ್ಟವಾಗಿ ಮಾಡಿರುವುದು ಉಲ್ಲೇಖನೀಯ ವಿಚಾರ. ಚಲನಚಿತ್ರ ನಟಿ ಹಾಗೂ ಮಾಜಿ ಮಂತ್ರಿಗಳೂ ಆಗಿರುವ ಶ್ರೀಮತಿ ಉಮಾಶ್ರೀಯವರ ಉಪಸ್ಥಿತಿಯು ಉತ್ಸವಕ್ಕೆ ರಂಗೇರಿಸಿತ್ತು.
ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ ಕಾಣಬರುವ ಸೋಲುಗಳಿಂದಲೂ, ಗೆಲುವುಗಳಿಂದಲೂ ಪಾಠಗಳನ್ನು ಕಲಿಯುತ್ತೇವೆ ಸೋಲುಗಳ ಅನುಭವದಿಂದ ಭವಿಷತ್ನಲ್ಲಿ ಬರಬಹುದಾದ ಪರಿಭವಗಳನ್ನು ಎದುರಿಸುವ ಕ್ರಮಗಳನ್ನು ರೂಪಿಸಬಹುದು. ಯಶಸ್ಸಿಗೆ ಕಾರಣದವಾದ ಅಂಶಗಳನ್ನು ಅನುμÁ್ಠನಗೊಳಿಸಿದರೆ ಕಾರ್ಯಸಿದ್ಧಿಸಬಹುದು. ನಡೆದು ಬಂದ ದಾರಿಯ ಅವಲೋಕನದಿಂದ ಮುಂದಿನ ದಾರಿಯನ್ನು ಸುಗಮವೂ ಸುಭದ್ರವೂ ಆಗುವಂತೆ ರೂಪಿಸಬಹುದು. ಕುಲದೇವರಾದ ಶ್ರೀ ವೀರಭದ್ರ ಹಾಗೂ ಪರಿವಾರ ದೈವಗಳು ನಮ್ಮೆಲ್ಲರಲ್ಲಿ ಜೀವನ ಸ್ಫೂರ್ತಿಯನ್ನೂ ಧೈರ್ಯವನ್ನೂ ಉತ್ಸಾಹವನ್ನೂ ಮೂಡಿಸಿ ಸಮಷ್ಟಿಸಮಾಜದಲ್ಲಿ ತಲೆಯೆತ್ತಿ ಪ್ರತಿμÉ್ಠಯ ಬಾಳನ್ನು ಬಾಳುವಂತೆ ಅನುಗ್ರಹಿಸಲೆಂದು ಪ್ರಾರ್ಥನೆ.