” ಈ ವಯಸ್ಸಿಗೆ ಮದುವೆಯಾ ? ” ಹಿರಿಯ ಮಗಳು ಮೂತಿ ತಿರುವಿದಾಗ ಎಂಬತ್ತೆರಡರ ವಯಸ್ಸಿನ ಅಪ್ಪ ” ತಪ್ಪೇನು ? ” ಎಂದರು. “ಅಲ್ಲಾ ,ನನ್ನ ಮಗಳಿಗೆ ಆಗಲೇ ಮದುವೆಯಾಗಿ ಮಗುವಾಗಿದೆ. ನಾನೇ ಅಜ್ಜಿಯಾಗಿ ಆಯಿತು” ಎಂದು ಆಕೆ ರಾಗ ತೆಗೆದಾಗ ಶ್ಯಾಮ ರಾಯರು “ಬಾಯಿ ಮುಚ್ಚು ,ನೀನೇನೂ ಮಾಡ ಬೇಕಿಲ್ಲ. ನಿನ್ನ ಅಭಿಪ್ರಾಯವೂ ಬೇಕಿಲ್ಲ . ಏನೋ ಮಕ್ಕಳಲ್ಲಿ ಹೇಳ ಬೇಕೆನಿಸಿತು ಹೇಳಿದೆ” ಎಂದರು.
ಸ್ವಲ್ಪ ಹೊತ್ತಿನಲ್ಲಿ ರಾಯರ ಇನ್ನೆರಡು ಮಕ್ಕಳು ಬಂದವರು ಹೀಗೆ ಗೊಣಗಿದಾಗ ರಾಯರು ಅವರ ಬಾಯಿಯನ್ನೂ ಮುಚ್ಚಿಸಿದರು. “ನಡೆಯ ಬೇಕಾದರೆ ಇನ್ನೊಬ್ಬರ ಆಸರೆ ಬೇಕು. ಬಾಯಿಯೇನು ಕಡಿಮೆ ಇಲ್ಲ “ಎಂದು ತಮ್ಮಲ್ಲೇ ಗೊಣಗಿಕೊಂಡರು ಮಕ್ಕಳು. ಆದರೆ ಸಾಕಷ್ಟು ಸ್ಥಿತಿವಂತರಾಗಿದ್ದ ತಂದೆಯ ಆಸ್ತಿಯಲ್ಲಿ ಪಾಲು ಸಿಗುವುದೋ ಇಲ್ಲವೋ ಎಂಬ ಭಯ. ಧ್ವನಿಯೇಳದು ಜೋರಾಗಿ.
ಆಸ್ತಿ ಹಂಚುವರೇನೋ ಎಂದು ಬಂದಿದ್ದ ಮಕ್ಕಳಿಗೆ ಮದುವೆಯ ವಿಚಾರ ಕೇಳಿ ತಲೆ ತಿರುಗಿದಂತಾಗಿತ್ತು. “ನಾಳೆಯೇ ಮದುವೆ ,ಬರುವವರೂ ಬನ್ನಿ. ಬರದಿದ್ದರೂ ಚಿಂತೆಯಿಲ್ಲ ” ರಾಯರು ಗುಡುಗಿದಾಗ ” ಅಮ್ಮ ,ಇರ ಬೇಕಿತ್ತು ಇಂಥದ್ದು ನಡೆಯಲು ಬಿಡುತ್ತಿರಲಿಲ್ಲ.” ಅವರವರೊಳಗೆ ಗೊಣಗುಟ್ಟಿದರೂ ಎಲ್ಲರೂ ತೆಪ್ಪಗಾದರು. ಅದೇ ದಿನ ಸಂಜೆ ರಾಯರು ಹಿರಿಯ ಮಗನನ್ನು ಬಿಟ್ಟು ಉಳಿದವರಿಗೆ ಅವರವರ ಆಸ್ತಿ ಪತ್ರ ಹಂಚಿ ಕೊಟ್ಟಾಗ ಅವರಿಗೆಲ್ಲ ಒಳಗೊಳಗೆ ಖುಷಿ. “ಅಬ್ಬಾ ! ಸಿಕ್ಕಿತಲ್ಲ” ಎಂದು. ಅಪ್ಪ , ಮದುವೆ ಅಂದರು. ವಿವರ ಕೊಡಲೇ ಇಲ್ಲ. ಅದನ್ನು ಕಟ್ಟಿಕೊಂಡು ನಾವೇನು ಮಾಡುವುದು ? ನಮಗೆ ಬೇಕಾದ್ದು ಸಿಕ್ಕಿತಲ್ಲ. ಇವತ್ತೊಂದು ದಿನ ಇಲ್ಲಿ ಕಳೆಯುವ. ನಾಳೆಯಿಂದ ನಮಗೂ ಇವರಿಗೂ ಮೊದಲಿನಂತೆ. ನಾವೊಂದು ತೀರ . ಅವರೊಂದು ತೀರ ಎಂದು ಬಂದಿದ್ದ ಮಕ್ಕಳೆಲ್ಲರೂ ನಿರಾಳ.
ಹಿರಿಯಣ್ಣನ ಪಕ್ಕದಲ್ಲಿ ನೆರೆಮನೆಯ ಶ್ರೀಲಕ್ಷ್ಮೀ ! . ಅರೆ ! ಇದೇನು ಆಕೆಗೆರಡು ಮಕ್ಕಳಿಲ್ವೇ ? . ಎರಡು ಮಕ್ಕಳನ್ನು ಕರುಣಿಸಿ ಆಕೆಯ ಪತಿ ಇನ್ನೋರ್ವಳ ಜೊತೆ ಮದುವೆಯಾದ ನಾಲ್ಕೇ ವರ್ಷಕ್ಕೆ ಹೋಗಿದ್ದ.. ಆನಂತರ ಆಕೆ ತವರು ಮನೆಯಲ್ಲೇ ಇದ್ದಳು ಅಲ್ವಾ ? ಅವಳಿಗೆ ಮಕ್ಕಳು ಬೇರೆ ಇದ್ದಾರೆ. ಒಬ್ಬನಿಗೆ ಮದುವೆ ಬೇರೆ ಆಗಿದೆ. ಇದೆಂಥ ಕಥೆಯಪ್ಪ ? ಅಣ್ಣ ಮತ್ತು ಆಕೆಯ ನಡುವೆ ಏನಾದರೂ ? ಛೇ ! ಛೇ ! ಇರಲಿಕ್ಕಿಲ್ಲ. ಈ ವಯಸ್ಸಲ್ಲೇ ? ಅಣ್ಣನಿಗೆ ಐವತ್ತೆಂಟು ಅಲ್ವಾ ? ಆಕೆ ಅಣ್ಣನಿಗಿಂತ ಒಂದೆರಡು ವರ್ಷ ಚಿಕ್ಕವಳಿರ ಬೇಕು. ಗುಣದಲ್ಲಿ ಅಪ್ಪಟ ಚಿನ್ನ.. ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಈ ವಯಸ್ಸಲ್ಲಿ ?……
ಹಿರಿಯಣ್ಣನಿಗೂ ಬದುಕಿದೆ ಎಂಬುದನ್ನು ಮರೆತ ತಮ್ಮ ತಂಗಿಯರಿಂದ ಇನ್ನೇನು ಯೋಚಿಸಲು ಸಾಧ್ಯ. ಐವತ್ತರ ವಯದಲ್ಲಿ ಅಪ್ಪ ಅಪಘಾತವೊಂದರಲ್ಲಿ ಕಾಲಿನ ಬಲ ಕಳೆದುಕೊಂಡು ನಡೆಯಲಾಗದೆ ಒದ್ದಾಡಿದಾಗ ತಾಯಿಯ ಆಣತಿಯಂತೆ ಮನೆಯ ಜವಾಬ್ದಾರಿ ಹೊತ್ತವನು ಹಿರಿಯಣ್ಣ. ಅಪ್ಪ ಸಂಪಾದಿಸಿದ್ದ ತೋಟ ಗದ್ದೆಗಳ ಜವಾಬ್ದಾರಿ ಹೊತ್ತಿದ್ದ. ಅಪ್ಪಟ ಕೃಷಿಕನಾಗಿಯೇ ಬಿಟ್ಟಿದ್ದ. ತಮ್ಮ ತಂಗಿಯರ ಬಾಳಿಗೊಂದು ಅರ್ಥ ಕೊಟ್ಟಿದ್ದ. ತನ್ನ ಬಾಳಿಗೊಂದು ಅರ್ಥ ಕೊಟ್ಟು ಕೊಳ್ಳುವುದರಲ್ಲಿ ಎಡವಿದ್ದ. ಕಳೆದ ವರ್ಷ ತೀರಿ ಹೋದ ಶ್ಯಾಮ ರಾಯರ ಮಡದಿಯೂ ಹಿರಿಯ ಮಗ ಎಂದರೆ ದುಡಿಯುವ ಯಂತ್ರವೆಂದೇ ತಿಳಿದಿದ್ದರು.
ಇತ್ತೀಚೆಗೆ ಶ್ಯಾಮ ರಾಯರಿಗೆ ಮಗನನ್ನು ಕಂಡಾಗಲೆಲ್ಲ ನೋವು ಒತ್ತರಿಸಿ ಬರುತ್ತಿತ್ತು. ನಾಳೆ ನಾನು ಇಲ್ಲವಾದರೆ ನನ್ನುಳಿದ ಮಕ್ಕಳು ಅವರ ಹಿರಿಯಣ್ಣನನ್ನು ನೋಡಿಕೊಳ್ಳುವುದಿಲ್ಲ ಎಂಬುದು ಮನದಟ್ಟಾಗಿತ್ತು. ಮಗ ಮತ್ತು ಶ್ರೀಲಕ್ಷ್ಮೀಯನ್ನು ಒಪ್ಪಿಸಿದರು ಆಕೆಯ ಮಕ್ಕಳ ಒಪ್ಪಿಗೆಯ ಮೇರೆಗೆ. ತಪ್ಪೇನು ಒಬ್ಬರಿಗೊಬ್ಬರು ಉತ್ತಮ ಸ್ನೇಹಿತರಾಗಿ ಒಂದೇ ಸೂರಿನಡಿ ಒಂದಷ್ಟು ವರ್ಷವಾದರೂ ನೆಮ್ಮದಿಯಾಗಿರಲಿ. ಹಿರಿಯ ಮಗ – ಸೊಸೆ ತನ್ನ ಜೊತೆಗಿರುವನೆಂಬ ಸಂತೃಪ್ತ ಭಾವ ಅವರಲ್ಲಿ
ಶೋಭಾ ಹರಿಪ್ರಸಾದ ಶೆಟ್ಟಿಗಾರ