ಸ್ಥಳೀಯ ಪತ್ರಿಕೆಯೊಂದನ್ನು ಓದುತ್ತಿದ್ದ ರಾಯರು ಥಟ್ಟನೇ ಎದ್ದು ನಿಂತವರು ಮತ್ತೆ ಕುಸಿದು ಕುಳಿತು ಹಣೆ ಉಜ್ಜ ತೊಡಗಿದರು. ಎದುರಿಗಿದ್ದ ನೀರುಳ್ಳಿ ಬಜೆ ಎರಡು ಮೂರು ಖಾಲಿಯಾದದ್ದು ಬಿಟ್ಟರೆ ತಟ್ಟೆಯಲ್ಲಿ ಹಾಗೆ ಉಳಿದಿತ್ತು. ಬಿಸಿ ಬಿಸಿ ಕಾಫಿಯೊಂದಿಗೆ ಹೊರ ಬಂದ ಸೀತಕ್ಕ “ಇವರಿಗೇನಾಯ್ತಪ್ಪ ?” ಎಂದು ಅವಸರವಸರದಿಂದ ಮೇಜಿನ ಮೇಲಿರಿಸಿ ” ಏನಾಯಿತು ? ಏನಾಯಿತು ? ” ಎಂದು ಪತಿಯ ತೋಳನ್ನು ಹಿಡಿದು ಕೇಳ ತೊಡಗಿದರು. ” ಏನಿಲ್ಲ “ಎಂದು ಅಬ್ಬರಿಸಿದ ಅವರು ತನ್ನ ಮೊಬೈಲ್ ಪೋನ್ ತರಲು ಹೇಳಿದರು. ನೇತು ಹಾಕಿದ್ದ ಅಂಗಿಯಲ್ಲಿದ್ದ ಮೊಬೈಲ್ ನ್ನು ತಂದು ಅವರ ಕೈಯಲ್ಲಿ ಇರಿಸಿದ ಸೀತಕ್ಕ ಏನೊಂದೂ ತಿಳಿಯದೇ ನೋಡುತ್ತ ನಿಂತರು. ಯಾವುದೋ ಒಂದು ನಂಬರಿಗೆ ಕರೆ ಮಾಡಿ ” ಈಗಲೇ ಬಾ ಮನೆಗೆ” ಎಂದರು ಶಾಂತ ದನಿಯಲ್ಲಿ. ಸೀತಕ್ಕನ ಮುಖ ಬಾಡಿತ್ತು. ಏನೆಂದು ಕೇಳಿದೊಡನೆ ನಮ್ಮ ಮೇಲೆ ಹಾರಾಟ. ಮೂರನೆಯವರ ಬಳಿ ಅದೇನು ಮೃದು ಮಾತು. ” ಗಂಡಸರೇ ಹೀಗೇನೋ ” ಮನದಲ್ಲೇ ಅಂದುಕೊಂಡು ಬರುವವರು ಯಾರಿರ ಬಹುದು ? ನೋಡೋಣ ಎಂದು ಕಾದು ಕೂತವರಿಗೆ ಅಂಗಳದಲ್ಲಿ ರಿಕ್ಷಾ ಬಂದು ನಿಂತದ್ದು ಕಂಡಿತು. ರಾಯರು ಅವಸರವಸರದಿಂದ ಹೊರಟು ರಿಕ್ಷಾ ಏರಿದಾಗ ಸೀತಕ್ಕ ಬಿಡುವರೇ ? “ಏನೋ ಬೇಸರದಲ್ಲಿ ಇದ್ದ ಹಾಗೆ ಇದೆ. ನಾನೂ ಬರುವೆ ” ಎಂದು ಹಿಂದಿನಿಂದ ಓಡಿದರು. ರಿಕ್ಷಾದವರ ಎದುರು ಗಂಡ ಬೈಯುವುದಿಲ್ಲ ಎಂದು ಸೀತಕ್ಕನಿಗೆ ಖಾತ್ರಿ ಇತ್ತು. ದುರುಗುಟ್ಟಿ ನೋಡಿದ ರಾಯರು ಸುಮ್ಮನಾದರು.
ರಿಕ್ಷಾ ಹೋಗಿ ನಿಂತದ್ದು ರಾಯರ ಚಿಕ್ಕ ತಮ್ಮನ ಮನೆಯೆದುರು. “ಅರೇ ,ಇವನು ಅಣ್ಣ – ಅತ್ತಿಗೆಯೊಂದಿಗೆ ಸಂಪರ್ಕ ಇಟ್ಟು ಕೊಳ್ಳದವ. ಮನೆ ಕಟ್ಟುವ ಸಂದರ್ಭದಲ್ಲಿ ಅಣ್ಣ ಕೊಟ್ಟ ಸಲಹೆ ಗಾಳಿಗೆ ತೂರಿದ್ದ. ಅವನ ಹೆಂಡತಿಯಂತೂ ” ಅವರಿಗೆಲ್ಲ ಹೊಟ್ಟೆಗಿಚ್ಚು . ನಮ್ಮಿಷ್ಟ ಇವರಿಗೇನಂತೆ ? ” ಎಂದು ಮೂತಿ ತಿರುವಿದ್ದಳು. ಸೀತಕ್ಕನ ಮಾವ ಸೋಮಪ್ಪನವರು ಊರಲ್ಲಿದ್ದ ಹಳೆ ಮನೆಯನ್ನು ಮಾರಿ ತನ್ನಿಬ್ಬರು ಗಂಡು ಮಕ್ಕಳಿಗೆ ಹಣವನ್ನು ಸಮಾನವಾಗಿ ಹಂಚಿ ದೊಡ್ಡ ಮಗ ಸೊಸೆಯೊಂದಿಗೆ ಬಂದು ನೆಲೆಸಿದ್ದರು.
ಹಲವಾರು ವರ್ಷಗಳಿಂದ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಸೀತಕ್ಕನ ಗಂಡ ಆ ಹಣದಿಂದ ಮನೆಯೊಂದನ್ನು ಯಾವುದೇ ಸಾಲ ಮಾಡದೇ ಕಟ್ಟಿಕೊಳ್ಳಲು ಸಾಧ್ಯವಾಗಿತ್ತು. ಇವರೊಂದಿಗೇ ಇದ್ದರು ತಮ್ಮ ಮತ್ತು ತಮ್ಮನ ಹೆಂಡತಿ. ಅಣ್ಣನ ಮನೆ ನೋಡಿ ತಮ್ಮನಿಗೂ ಹೊಸತನ್ನು ಕಟ್ಟುವಾಸೆ. ಬ್ಯಾಂಕ್ ಕೆಲಸದಲ್ಲಿದ್ದ ತಮ್ಮ. ಅವನ ಹಣ ಅವನು ಕಟ್ಟುವುದು ತಾನೇ ? . ಎಲ್ಲರಿಗೂ ಖುಷಿಯಾಗಿತ್ತು.
ಆದರೆ ಪುಟ್ಟ ಮನೆ ಹೋಗಿ ದೊಡ್ಡ ಬಂಗಲೆಯ ಆಸೆ ಮೊಳೆತಾಗ ಅವರಿಬ್ಬರಲ್ಲಿ , ರಾಯರು ತಮ್ಮನಿಗೆ ಸಾಲ ಅತಿಯಾಗಿ ಮಾಡ ಬೇಡ “ಎಂಬ ಸಲಹೆ ನೀಡಿದ್ದರು. ತಮ್ಮನಿಗೇನೋ ಅಣ್ಣನ ಮಾತು ಸತ್ಯವೆನಿಸಿದ್ದರೂ ಅವನ ಹೆಂಡತಿ ಒಪ್ಪ ಬೇಕಲ್ಲಾ. ಸಿಡೆದೆದ್ದ ಆಕೆ ” ಅವರಿಗೆಲ್ಲ ಹೊಟ್ಟೆಗಿಚ್ಚು. ಅವರ ಮನೆಗಿಂತ ದೊಡ್ಡದ್ದನ್ನು ಕಟ್ಟುವೆವು ಎಂದು” ಎಂದು ಪತಿಯ ಬಳಿ ಇಲ್ಲ ಸಲ್ಲದ್ದನ್ನು ಹೇಳಿ ಅವನನ್ನು ಬದಲಾಯಿಸಿದ್ದಳು.ಅವಳಿಗೆ ಎತ್ತಿಕೊಡಲು ಅವಳ ತಾಯಿ ಬೇರೆ. ಅಂದಿನಿಂದ ಅವರಿಬ್ಬರು ಆಕೆಯ ತವರು ಮನೆಯಲ್ಲೇ ಇದ್ದರು.
*** **** ***”
ಎರಡು ವರ್ಷದ ಹಿಂದೆ ಗೃಹ ಪ್ರವೇಶಕ್ಕೆ ಹೋದ ಸಂದರ್ಭದಲ್ಲಿ ಅಪರಿಚಿತರಂತೆ ನಡೆಸಿಕೊಂಡಿದ್ದರು ಮಾತ್ರವಲ್ಲದೆ ಅವಮಾನವನ್ನೂ ಮಾಡಿದ್ದರು.. ಹಾಗಾಗಿ ಅವರ ನಡುವಿನ ಸಂಪರ್ಕ ಸಂಪೂರ್ಣ ನಿಂತು ಹೋಗಿತ್ತು. ಇವತ್ತು ಎಲ್ಲವನ್ನೂ ಮರೆತಂತೆ ರಾಯರು ತಮ್ಮನ ಮನೆಗೆ !
ಹೊರಗಡೆ ಕುಳಿತಿದ್ದ ತಮ್ಮ ಎದ್ದು ನಿಂತು ” ಏನು ? ” ಎಂದು ದನಿಯೇರಿಸಿ ಕೇಳಿದ್ದ. “ಒಳಗೆ ಹೋಗಿ ಮಾತಾಡುವ ” ಎಂದಾಗ ರಾಯರು “ಯಾಕೆ ? ” ಎಂದು ಅವನ ಹೆಂಡತಿ ಬೇರೆ. “ಸರಿ” ಎಂದ ರಾಯರು ” ಇದೇನು ? ” ಎಂದು ಪತ್ರಿಕೆಯಲಿದ್ದುದ್ದನ್ನು ತೋರಿದಾಗ ಇಬ್ಬರೂ ಮೆತ್ತಗಾದರೂ ಮತ್ತೆ ತಗ್ಗದ ಅಹಂಕಾರ. ” ಎಲ್ಲಾ ಮಾಡುವುದನ್ನೇ ಮಾಡಿದ್ದೇವೆ. ” ಎಂದಳು ತಮ್ಮನ ಹೆಂಡತಿ. ತಮ್ಮ ಹೌದೆಂದು ತಲೆಯಲಾಡಿಸಿದ. “ಮೊದಲೇ ಹೇಳಿರಲಿಲ್ವಾ? ” ಎಂದಾಗ ರಾಯರು ತಮ್ಮನ ಕಣ್ಣಿನಲ್ಲಿ ನೀರು ಬಂತು. ” ಕುತ್ತಿಗೆ ತನಕ ಬಂದಿದೆ. ಬೇರೆ ಮಾರ್ಗ ಇರಲಿಲ್ಲ ” ಎಂದ ಬಿಕ್ಕುತ್ತ.
ವಿಷಯ ಏನೆಂದು ತಿಳಿಯದೆ ಸೀತಕ್ಕ ಮೌನದಲ್ಲಿ ಒಳಗೆ ಕರೆದಾಗ ಹೋಗಿ ಕುಳಿತರು. ಆಗಷ್ಟೇ ತಿಳಿಯಿತು. ಸಾಲ ಏರಿ ಮನೆ ಮಾರಾಟದ ಜಾಹೀರಾತು ಪತ್ರಿಕೆಗೆ ಹಾಕಿದ್ದು. ಎಷ್ಟೆಂದರೂ ರಕ್ತ ಸಂಬಂಧ. ಕೈ ಬಿಡುವರೇ ಅಣ್ಣ ? . ತನ್ನಿಂದಾದಷ್ಟು ನೆರವು ನೀಡಿ ಮನೆ ಉಳಿಸಿ ಕೊಟ್ಟರು.
“ಸಹಾಯ ಮಾಡಿದ್ದೇನೋ ನಿಜ. ನಾಳೆ ನನ್ನ ಮಕ್ಕಳ ಗತಿ ?.” ಪ್ರಶ್ನೆ ಮಾಡಿದರೆ ಬುಸುಗುಟ್ಟುವ ಗಂಡ. “ಯಾರದೋ ಎಡವಟ್ಟು ,ಯಾರದೋ ನೆರವು. ಬುದ್ಧಿ ಇಲ್ಲದವರು. ನನ್ನ ಗಂಡ ಇದ್ದದ್ದೆಲ್ಲ ಕೊಟ್ಟು ನಾಳೆ ನಮ್ಮನ್ನು ಬೀದಿಗೆ ತಂದು ನಿಲ್ಲಿಸಿದರೇ ? ” ಕಣ್ಣಲ್ಲಿ ನೀರು ಬಂದಿತ್ತು .ನಿಟ್ಟುಸಿರು ಬಿಟ್ಟರು ಸೀತಕ್ಕ.
ಶೋಭಾ ಹರಿಪ್ರಸಾದ ಶೆಟ್ಟಿಗಾರ್ ಉಡುಪಿ